ಬಸ್’ನಲ್ಲಿ ಮೂತ್ರ ವಿಸರ್ಜನೆ ಮಾಡಿದಾತ ಕೊನೆಗೂ ಪತ್ತೆ: ವಿಷಯ ತಿಳಿದ ಬಳಿಕ KSRTCಗೆ ಮುಜುಗರ!

Prasthutha|

ಮಂಗಳೂರು: ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ (ಕೆಎಸ್ ಆರ್ ಟಿಸಿ) ನಾನ್​ ಎಸಿ ಸ್ಲೀಪರ್​ ಬಸ್​’ನಲ್ಲಿ ಪ್ರಯಾಣಿಕನೊಬ್ಬ ಸೀಟಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ತನಿಖೆ ಕೈಗೊಂಡಿರುವ ಸಂಸ್ಥೆಯ ಅಧಿಕಾರಿಗಳು ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿದ್ದು, ಆತ ಬೇರಾರೂ ಅಲ್ಲ, ಕೆಎಸ್’ಆರ್’ಟಿಸಿ ಸಿಬ್ಬಂದಿ ಎಂಬುದು ಬೆಳಕಿಗೆ ಬಂದಿದೆ.

- Advertisement -

ಪಾನಮತ್ತನಾಗಿದ್ದ ಪ್ರಯಾಣಿಕ ಯುವತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ, ಖಾಲಿ ಸೀಟಿನ‌ ಮೇಲೆ‌ ಮೂತ್ರ ವಿಸರ್ಜನೆ ಮಾಡಿದ್ದ, ಆತನನ್ನು ಬೈದು ಅಲ್ಲಿಯೇ ಇಳಿಸಿ ಪ್ರಯಾಣ ಮುಂದುವರೆಸಲಾಗಿದೆ ಎಂದು ಕೆಎಸ್’ಆರ್’ಟಿಸಿ ನಿನ್ನೆಯಷ್ಟೇ ಸ್ಪಷ್ಟನೆ ನೀಡಿತ್ತು.

 ಬಳಿಕ ತನಿಖೆ ಕೈಗೊಂಡಾಗ, ಸಂಸ್ಥೆಯ ಮೆಕಾನಿಕ್ ಒಬ್ಬ ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಇದರಿಂದ ತೀವ್ರ ಮುಜುಗರಕ್ಕೆ ಗುರಿಯಾಗಿರುವ ಕೆಎಸ್’ಆರ್’ಟಿಸಿ, ಮೆಕಾನಿಕ್, ಅಂದು ಆ ಬಸ್’ನಲ್ಲಿದ್ದ ಡ್ರೈವರ್, ಕಂಡೆಕ್ಟರ್ ಅವರನ್ನು ಅಮಾನತುಗೊಳಿಸಲು ಚಿಂತನೆ ನಡೆಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

- Advertisement -

ಆರೋಪಿ ಕೆಎಸ್’ಆರ್’ಟಿಸಿ ಮೆಕಾನಿಕ್ ಮುಂಗಡ ಆಸನ ಕಾಯ್ದಿರಿಸಿರಲಿಲ್ಲ. ಮಾತ್ರವಲ್ಲ ಕೆಎಸ್’ಆರ್’ಟಿಸಿ ಸಿಬ್ಬಂದಿಯವರು ಸಾರಿಗೆ ಬಸ್’ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಈ ಮೆಕಾನಿಕ್, ಸ್ಲೀಪರ್ ಬಸ್’ನಲ್ಲಿ ಬಂದಿದ್ದಾರೆ. ತಮ್ಮದೇ ಸಂಸ್ಥೆಯ ಸಿಬ್ಬಂದಿ ಎಂಬ ನೆಲೆಯಲ್ಲಿ ಕಂಡೆಕ್ಟರ್ ಅವರು ಟಿಕೆಟ್ ಕೊಟ್ಟಿರಲಿಲ್ಲ. ಇದೀಗ ಮೆಕಾನಿಕ್ ತೋರಿದ ದುರ್ವರ್ತನೆಯಿಂದ ಅಂದು ಬಸ್’ನಲ್ಲಿ ಕರ್ತವ್ಯದಲ್ಲಿದ್ದ ಕಂಡೆಕ್ಟರ್ ಮತ್ತು ಡ್ರೈವರ್ ಸಂಕಷ್ಟಕ್ಕೆ ಈಡಾಗಿದ್ದಾರೆ.

ಮೂತ್ರ ವಿಸರ್ಜನೆ ಮಾಡಿದ ಆರೋಪಿ ಮೆಕಾನಿಕ್, ಆಸನ ಸಂಖ್ಯೆ 29ರಲ್ಲಿ ಕುಳಿತಿದ್ದರೆ, ಯುವತಿಯು ಆಸನ ಸಂಖ್ಯೆ 3ರಲ್ಲಿದ್ದರು. ಬಸ್ಸನ್ನು ಚಾಲಕ ಹುಬ್ಬಳ್ಳಿಯ ಕಿರೇಸೂರು ಹೋಟೇಲ್ ಬಳಿ ರಾತ್ರಿ 10:30ಕ್ಕೆ ಊಟ, ತಿಂಡಿ‌ ಮತ್ತು ನೈಸರ್ಗಿಕ ಕರೆಗಾಗಿ ನಿಲ್ಲಿಸಿದ್ದರು. ಪ್ರಯಾಣಿಕರೆಲ್ಲ ಬಸ್ಸಿನಿಂದಿಳಿದು ಊಟಕ್ಕೆ ಹೋಗಿದ್ದರು. ಆಸನ ಸಂಖ್ಯೆ 29ರಲ್ಲಿದ್ದ ಪಾನಮತ್ತ ಮೆಕಾನಿಕ್ ಚಾಲಕನ ಹಿಂದಿನ ಸೀಟಿನ (ಆಸನ ಸಂಖ್ಯೆ 3) ಬಳಿ ಬಂದು ಅದರ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಆ ಸಮಯದಲ್ಲಿ ಊಟ ಮುಗಿಸಿ ಮಹಿಳಾ ಪ್ರಯಾಣಿಕರು (ಅವರು ಆಸನ ಸಂಖ್ಯೆ 3ರಲ್ಲಿದ್ದವರು) ಬಸ್ ಏರಲು ಮುಂದಾದಾಗ, ಘಟನೆಯನ್ನು ಕಂಡು ತಕ್ಷಣವೇ ಚಾಲಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಚಾಲಕರು, ನಿರ್ವಾಹಕರು ಮತ್ತು ಇತರೆ ಪ್ರಯಾಣಿಕರು, ಆತನನ್ನು ಬಸ್ಸಿನಿಂದ ಕೆಳಗಿಳಿಸಿ ಬೈದು ತರಾಟೆಗೆ ತೆಗೆದುಕೊಂಡಿದ್ದು, ನಂತರ ಆಸನವನ್ನು ಶುಚಿಗೊಳಿಸಿದ ಬಸ್ ಸಿಬ್ಬಂದಿ ಪ್ರಯಾಣಿಕನನ್ನು ಅಲ್ಲಿಯೇ ಇಳಿಸಿ ಪ್ರಯಾಣ ಮುಂದುವರಿಸಿದ್ದಾರೆ. ಯುವತಿಯು ಆಸನ ಸಂಖ್ಯೆ 9ರಲ್ಲಿ ಕುಳಿತು ಪ್ರಯಾಣ ಮುಂದುವರಿಸಿ ಇತರ ಆರು ಮಂದಿ ಪ್ರಯಾಣಿಕರ ಜೊತೆ ಹುಬ್ಬಳ್ಳಿಯಲ್ಲಿ ಇಳಿದಿದ್ದಾರೆ.  



Join Whatsapp