ಲಕ್ನೋ: ಪತ್ನಿಯ ವಾಗ್ವಾದ ಮತ್ತು ಹಲ್ಲೆಗಳಿಂದ ಬೇಸತ್ತ ವ್ಯಕ್ತಿಯೊಬ್ಬ ಕಳೆದ ಒಂದು ತಿಂಗಳಿನಿಂದ 80 ಅಡಿ ಎತ್ತರದ ತಾಳೆ ಮರದ ಮೇಲೆ ವಾಸಿಸುತ್ತಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯ ಕೋಪಗಂಜ್ ಪ್ರದೇಶದಲ್ಲಿ ನಡೆದಿದೆ.
ಕಳೆದ ಆರು ತಿಂಗಳುಗಳಿಂದ ಪತ್ನಿಯೊಂದಿಗೆ ಜಗಳವಾಡುತ್ತಿರುವ ರಾಮ್ ಪರ್ವೇಶ್(42) ಎಂಬಾತನಿಗೆ ಪತ್ನಿ ಥಳಿಸಿದ ಕಾರಣಕ್ಕೆ ಬೇಸತ್ತಿರುವ ಆತ ಊರಿನ ತಾಳೆ ಮರ ಹತ್ತಿ ಕುಳಿತಿದ್ದಾನೆ. ಹಲವು ದಿನಗಳಿಂದ ಅಲ್ಲಿಯೇ ಜೀವನ ನಡೆಸುತ್ತಿದ್ದಾನೆ ಎನ್ನಲಾಗಿದೆ.
ಗ್ರಾಮಸ್ಥರ ಪ್ರಕಾರ, ರಾಮ್ ಪರ್ವೇಶ್ ರಾತ್ರಿಯಲ್ಲಿ ಸ್ವಲ್ಪ ಸಮಯದಲ್ಲಿ ಮರದಿಂದ ಇಳಿದು, ಮಲವಿಸರ್ಜನೆ ಮಾಡಿದ ನಂತರ ಮರಕ್ಕೆ ಹಿಂತಿರುಗುತ್ತಾನೆ.
ಮನೆಯವರು ಪ್ರತಿದಿನ ಊಟವನ್ನು ಹಗ್ಗಕ್ಕೆ ಕಟ್ಟಿಕೊಡುತ್ತಿದ್ದು, ಅದನ್ನು ಮೇಲೆಳೆದುಕೊಂಡು ಆತ ಊಟ ಮಾಡುತ್ತಿದ್ದಾನೆ.
ಆತ ತಾಳೆ ಮರದ ಮೇಲೆ ವಾಸಿಸುವುದನ್ನು ಆಕ್ಷೇಪಿಸಿರುವ ಗ್ರಾಮದ ಮುಖ್ಯಸ್ಥ ದೀಪಕ್ ಕುಮಾರ್, ತಾಳೆ ಮರದ ಪಕ್ಕದಲ್ಲಿ ಅನೇಕ ಮನೆಗಳಿವೆ. ಜನರು ತಮ್ಮ ಮನೆಗಳಲ್ಲಿ ಏನು ಮಾಡುತ್ತಿದ್ದಾರೆಂದು ಆತ ಮರದ ಮೇಲಿಂದ ಗಮನಿಸುತ್ತಲೇ ಇರುತ್ತಾನೆ. ಅದು ಅವರ ಖಾಸಗಿತನದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮದ ಅನೇಕ ಮಹಿಳೆಯರು ಬಂದು ಈ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಆದರೆ ಪೊಲೀಸರು ಬಂದು ವೀಡಿಯೊ ಮಾಡಿ ಹೊರಟುಹೋದರು ಎಂದು ಹೇಳಿದರು.