ಹಾಸನ: ಮಕ್ಕಳನ್ನು ನೋಡಲು ಬಿಡಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ತಂದೆಯೋರ್ವ ತನ್ನ ಪತ್ನಿ, ಇಬ್ಬರು ಮಕ್ಕಳಿದ್ದ ಮೆನೆಗೆ ಬೆಂಕಿ ಹಚ್ಚಿದ ಘಟನೆ ದೊಡ್ಡಬೀಕನಹಳ್ಳಿಯಲ್ಲಿ ನಡೆದಿದ್ದು, ದುರಂತದಲ್ಲಿ ಮೂವರೂ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಗೀತಾ, ಚಿರಂತನ್ (7), ನಂದನ್ (5) ಗಾಯಗೊಂಡಿದ್ದು, ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಹಚ್ಚಿದ ಬೆಂಕಿಯಿಂದಾಗಿ ಮನೆಯೊಳಗಿದ್ದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ.
ಅಂಕನಹಳ್ಳಿಯ ರಂಗಸ್ವಾಮಿ ಮತ್ತು ಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ದಂಪತಿ ನಡುವೆ ಜಮೀನು ವಿಚಾರವಾಗಿ ಪದೇ ಪದೇ ಜಗಳ ನಡೆಯುತ್ತಿತ್ತು. ಈ ವಿಚಾರವಾಗಿ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ ಸಂಸಾರದಲ್ಲಿ ಹೊಂದಾಣಿಕೆ ಕಾಣದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ದಂಪತಿ ಬೇರೆಯಾಗಿದ್ದರು. ಈ ವೇಳೆ ಗೀತಾ ಅವರು ಇಬ್ಬರು ಮಕ್ಕಳನ್ನು ತನ್ನೊಂದಿಗೆ ಇರಿಸಿಕೊಂಡಿದ್ದಳು.
ಮಕ್ಕಳು ತಾಯಿಯ ಜೊತೆ ಇರುವ ಹಿನ್ನೆಲೆಯಲ್ಲಿ ತನ್ನ ಮಕ್ಕಳನ್ನು ನೋಡಲೆಂದು ರಂಗಸ್ವಾಮಿ ಆಗ್ಗಾಗೆ ಬರುತ್ತಿದ್ದನು. ಹೀಗೆ ಬಂದು ಮಕ್ಕಳೊಂದಿಗೆ ಮಾತನಾಡಿ ಹೋಗುತ್ತಿದ್ದನು. ನಿನ್ನೆ ಮಕ್ಕಳನ್ನು ನೋಡಲು ಬಂದಾಗ ಗೀತಾ ತನ್ನ ಮಕ್ಕಳನ್ನು ನೋಡಲು ಬಿಡಲಿಲ್ಲ. ಇದರಿಂದ ರಂಗಸ್ವಾಮಿ ಕೋಪಗೊಂಡು, ಈ ಅಮಾನವೀಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್ನಿಂದ ಪೆಟ್ರೋಲ್ ತಂದ ರಂಗಸ್ವಾಮಿ ಹೆಂಡತಿ ಮತ್ತು ಮಕ್ಕಳು ನಿದ್ರೆಗೆ ಜಾರಿದ್ದಾಗ ಮಧ್ಯರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ವಿಚಾರ ತಿಳಿದ ಸ್ಥಳೀಯರು ಗೀತಾ ಮತ್ತು ಆಕೆಯ ಮಕ್ಕಳ ನೆರವಿಗೆ ಧಾವಿಸಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಮೂವರ ಜೀವ ಉಳಿದಿದೆ.
ಘಟನೆಯಲ್ಲಿ ತಾಯಿ, ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಂಗಸ್ವಾಮಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.