ಆರ್ಡರ್ ಮಾಡಿದ್ದು ಪಾಸ್’ಪೋರ್ಟ್ ಕವರ್: ಕವರ್ ತೆಗೆದು ನೋಡಿದ ಗ್ರಾಹಕನಿಗೆ ಕಾದಿತ್ತು ಶಾಕ್..!

Prasthutha|

ವಯನಾಡ್: ಆನ್’ಲೈನ್ ತಾಣಗಳಲ್ಲಿ ಆರ್ಡರ್ ಮಾಡಿದ ವಸ್ತುಗಳು ಗ್ರಾಹಕನ ಕೈ ಸೇರುವಾಗ ಇನ್ನೇನೋ ಆಗಿರುವ ಅದೆಷ್ಟೋ ಪ್ರಸಂಗಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಕೇರಳದ ವಯನಾಡ್’ನಲ್ಲಿ ಆನ್’ಲೈನ್ ಡೆಲಿವರಿಯಲ್ಲಿ ಆಗಿರುವ ಯಡವಟ್ಟು ಹಿಂದಿನ ಎಲ್ಲಾ ಘಟನೆಗಳನ್ನು ಮೀರಿಸುವಂತಿದೆ.

- Advertisement -

ಕೇರಳದ ವಯನಾಡ್ ಜಿಲ್ಲೆಯ ಕನಿಯಂಬೆಟ್ಟ ನಿವಾಸಿಯಾಗಿರುವ  ಮಿಥುನ್ ಬಾಬು ಆನ್’ಲೈನ್ ತಾಣ ಅಮೆಝಾನ್’ನಲ್ಲಿ ಪಾಸ್’ಪೋರ್ಟ್ ಕವರ್ ಆರ್ಡರ್ ಮಾಡಿದ್ದರು. ಕೆಲ ದಿನಗಳ ಬಳಿಕ ಡೆಲಿವರಿ ಸಿಕ್ಕಿದ ಕವರ್ ತೆಗೆದುನೋಡಿದ ಮಿಥುನ್ ಶಾಕ್ ಆಗಿದ್ದಾನೆ. ತಾನು ಆರ್ಡರ್ ಮಾಡಿದ್ದ ಪಾಸ್’ಪೋರ್ಟ್ ಕವರ್ ಜೊತೆಗೆ ಮತ್ತೋರ್ವ ವ್ಯಕ್ತಿಯ ನಿಜವಾದ ಪಾಸ್’ಪೋರ್ಟ್ ಕೂಡ ಮಿಥುನ್’ಗೆ ಡೆಲಿವರಿಯಾಗಿದೆ.

ಪೂರೈಕೆದಾರರ ಕಡೆಯಿಂದ ಆಗಿರುವ ಆಚಾತುರ್ಯವನ್ನು ಮಿಥುನ್, ಅಮೆಝಾನ್ ಕಸ್ಟಮರ್ ಕೇರ್’ಗೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಕಸ್ಟಮರ್ ಕೇರ್ ಕಡೆಯಿಂದ ಮಿಥುನ್ ಸಿಕ್ಕಿದ ಉತ್ತರ ವಿಚಿತ್ರವಾಗಿತ್ತು. ‘ಈ ತಪ್ಪು ಪುನರಾವರ್ತನೆ ಆಗುವುದಿಲ್ಲ, ಮುಂದಿನ ಬಾರಿ ಹೆಚ್ಚು ಜಾಗರೂಕರಾಗಿರಲು ನಾವು ಸೂಚಿಸುತ್ತೇವೆ ಎಂದಷ್ಟೇ  ಕಸ್ಟಮರ್ ಕೇರ್ ಸಿಬ್ಬಂದಿ ಹೇಳಿದ್ದಾರೆ.

- Advertisement -

ಪಾಸ್’ಪೋರ್ಟ್’ನಲ್ಲಿರುವ ವಿವರಗಳ ಪ್ರಕಾರ ಅದು ಕೇರಳದ ತ್ರಿಶೂರ್ ಜಿಲ್ಲೆಯ ಕುನ್ನಂಕುಳಮ್ ನಿವಾಸಿ ಮುಹಮ್ಮದ್ ಸಾಲಿಹ್ ಎಂಬವರಿಗೆ ಸೇರಿದ ಪಾಸ್’ಪೋರ್ಟ್ ಆಗಿತ್ತು. ಆದರೆ ಸಾಲಿಹ್ ಅವರ ಸಂಪರ್ಕ ಸಂಖ್ಯೆ ಇಲ್ಲದ ಕಾರಣ ಅವರನ್ನು ತಕ್ಷಣವೇ ಸಮೀಪಿಸಲು ಮಿಥುನ್’ಗೆ ಸಾಧ್ಯವಾಗಿರಲಿಲ್ಲ.

ಮಿಥುನ್ ಹೇಳುವ ಪ್ರಕಾರ, ಅಮೆಝಾನ್ ಮೂಲಕವೇ ಮುಹಮ್ಮದ್ ಸಾಲಿಹ್ ಕೂಡ ಪಾಸ್’ಪೋರ್ಟ್ ಕವರ್ ಆರ್ಡರ್ ಮಾಡಿದ್ದಾರೆ.  ಆ ಕವರ್’ಅನ್ನು ಬಳಸಿದ ಬಳಿಕ ಇಷ್ಟವಾಗದ ಕಾರಣ ಮತ್ತೆ ಅಮೆಝಾನ್’ಗೆ ಹಿಂತಿರುಗಿಸಿದ್ದಾರೆ. ಆದರೆ ಕವರ್ ಹಿಂತಿರುಗಿಸುವ ವೇಳೆ ಅದರೊಳಗಿದ್ದ ತಮ್ಮ ಪಾಸ್’ಪೋರ್ಟ್’ಅನ್ನು ತೆಗೆಯಲು ಸಾಲಿಹ್ ಮರೆತಿದ್ದಾರೆ. ಮತ್ತೊಂದೆಡೆ ಗ್ರಾಹಕನು ಹಿಂತಿರುಗಿಸಿದ ಕವರ್’ಅನ್ನು ಪರಿಶೀಲಿಸದ ಮಾರಾಟಗಾರರು, ಅದನ್ನು ಮತ್ತೋರ್ವ ಗ್ರಾಹಕನಿಗೆ ಮಾರಾಟ ಮಾಡಿರುವ ಸಾಧ್ಯತೆ ಇದೆ ಎಂದಿದ್ದಾರೆ.

ಕಳೆದ ಅಕ್ಟೋಬರ್’ನಲ್ಲಿ ಆನ್’ಲೈನ್’ನಲ್ಲಿ ಐಫೋನ್ ಆರ್ಡರ್ ಮಾಡಿದ್ದ ಆಲುವಾದ ವ್ಯಕ್ತಿಗೆ 5 ರು ಬೆಲೆಯ ಪಾತ್ರೆ ತೊಳೆಯುವ ಸೋಪ್’ ಡೆಲಿವರಿ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.



Join Whatsapp