ಬೆಂಗಳೂರು: ಮದ್ಯದ ಅಮಲಿನಲ್ಲಿ ಸಹ ಪ್ರಯಾಣಿಕನ ಜೊತೆ ಕಿರಿಕ್ ನಡೆಸಿ ವಿಮಾನದ ಪ್ಲಾಪ್ ಆಪ್ ದಿ ಓವರ್ ವಿಂಗ್ ಎಕ್ಸಿಟ್ ಡೋರ್ ತೆಗೆಯಲು ಯತ್ನಿಸಿದ ಘಟನೆ ದೆಹಲಿಯಿಂದ ನಗರಕ್ಕೆ ಬರುತ್ತಿದ್ದ ಇಂಡಿಗೋ 6ಇ308 ವಿಮಾನದಲ್ಲಿ ನಡೆದಿದೆ.
ಮದ್ಯದ ಅಮಲಿನಲ್ಲಿ ಪ್ರತೀಕ್ ಎಂಬಾತ ಸಹ ಪ್ರಯಾಣಿಕನ ಜೊತೆ ಜಗಳ ಮಾಡಿ, ತುರ್ತು ಬಾಗಿಲು ( ಎಕ್ಸಿಟ್ ಡೋರ್) ತೆಗೆಯಲು ಯತ್ನಿಸಿದ್ದಾನೆ. ಇತನ ವರ್ತನೆಯಿಂದ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.
ಕೆಲ ದಿನಗಳ ಹಿಂದೆ ದುಬೈನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಇಬ್ಬರು ಕುಡಿದು ಅನುಚಿತ ವರ್ತನೆ ತೋರಿದ್ದರು. ಇಬ್ಬರು ಪ್ರಯಾಣಿಕರು ಕುಡಿದ ಮತ್ತಿನಲ್ಲಿ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿತ್ತು.
ದುಬೈನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು. ಮುಂಬೈನಲ್ಲಿ ವಿಮಾನ ಇಳಿದ ನಂತರ ಅವರನ್ನು ಬಂಧಿಸಲಾಯಿತು ಮತ್ತು ನ್ಯಾಯಾಲಯದಿಂದ ಜಾಮೀನು ನೀಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಇಬ್ಬರು ಆರೋಪಿಗಳು ಪಾಲ್ಘರ್ ಮತ್ತು ಕೊಲ್ಹಾಪುರದ ನಲಸೋಪಾರದವರು, ಅವರು ಗಲ್ಫ್ನಲ್ಲಿ ಒಂದು ವರ್ಷ ಕೆಲಸ ಮಾಡಿ ಹಿಂತಿರುಗುತ್ತಿದ್ದರು ಮತ್ತು ಸುಂಕ ರಹಿತ ಅಂಗಡಿಯಿಂದ ತಂದ ಮದ್ಯವನ್ನು ಸೇವಿಸಿ ಜೋರಾಗಿ ಮಾತನಾಡಲು ಆರಂಭಿಸಿದ್ದರು.
ಆಗ ಸಹ ಪ್ರಯಾಣಿಕರು ಅವರ ವಿರುದ್ಧ ಧ್ವನಿ ಎತ್ತಿದಾಗ ವಿಮಾನ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರ ಜತೆ ಅಸಭ್ಯವಾಗಿ ನಡೆದುಕೊಂಡಿದ್ದರು. ಅಧಿಕಾರಿಗಳ ಪ್ರಕಾರ, ಈ ವರ್ಷದಲ್ಲಿ ಇದು ಏಳನೇ ಘಟನೆಯಾಗಿದ್ದು, ಇದೀಗ 8ನೇ ಬಾರಿ ನಡೆದಿದೆ. ವಿಮಾನ ಪ್ರಯಾಣಿಕರ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಿಸಲಾಗಿತ್ತು.
ಕೆಲ ದಿನಗಳ ಹಿಂದೆ ಅಷ್ಟೇ ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕ ಶೇಹರಿ ಚೌದರಿ ಎಂಬಾತ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದ.