ಮಧ್ಯಪ್ರದೇಶ | ಮಹಿಳೆಗೆ ಮದ್ಯ ಕುಡಿಸಿ ಹಾಡಹಗಲೇ ಫುಟ್ ಪಾತ್ ನಲ್ಲಿ ಅತ್ಯಾಚಾರ: ಆರೋಪಿ ಬಂಧನ

Prasthutha|

ಭೋಪಾಲ್: ಮಹಿಳೆಗೆ ಮದ್ಯ ಕುಡಿಸಿ ಹಾಡಹಗಲೇ ಫುಟ್ಪಾತ್ ನಲ್ಲಿ ಅತ್ಯಾಚಾರ ಮಾಡಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

- Advertisement -


ಕೊಯ್ಲಾ ಫಾಟಕ್ ಪ್ರದೇಶದಲ್ಲಿ ದುಷ್ಕರ್ಮಿಯೋರ್ವ ಮಹಿಳೆಗೆ ಮದ್ಯಪಾನ ಮಾಡಿಸಿ ಆಕೆಯನ್ನು ಫುಟ್ ಪಾತ್ ಮೇಲೆ ಹಗಲು ಹೊತ್ತಿನಲ್ಲೇ ಅತ್ಯಾಚಾರವೆಸಗಿದ್ದಾನೆ.


ದುಷ್ಕರ್ಮಿಯ ಕೃತ್ಯವನ್ನು ದಾರಿಹೋಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಮಾತ್ರವಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದ್ದು, ದುಷ್ಕರ್ಮಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

- Advertisement -


ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಲೇ ಎಚ್ಚೆತ್ತ ಉಜ್ಜಯಿನಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಅದೇ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್ಪಿ ಪ್ರದೀಪ್ ಶರ್ಮಾ ತಂಡವನ್ನು ರಚಿಸಿ ಆರೋಪಿಯನ್ನು ಬಂಧಿಸಲು ಸೂಚನೆ ನೀಡಿದ್ದರು. ಅದರಂತೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ಈ ಘಟನೆಯನ್ನು ಗಂಭೀರವಾಗಿ ಖಂಡಿಸಿರುವ ವಿಪಕ್ಷಗಳು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸಿವೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು, ‘ಧಾರ್ಮಿಕ ನಗರಿ ಉಜ್ಜಯಿನಿ ಮತ್ತೆ ಕಳಂಕಿತವಾಗಿದೆ. ಮುಖ್ಯಮಂತ್ರಿಗಳ ತವರೂರಿನ ಸ್ಥಿತಿ ಹೀಗಾದರೆ ರಾಜ್ಯದ ಉಳಿದ ಭಾಗದ ಸ್ಥಿತಿ ಹೇಗಿರುತ್ತದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ’ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp