ಟೋಕಿಯೋ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ತೀವ್ರ ತನಿಖೆ ನಡೆಸುತ್ತಿದ್ದಾರೆ.
ಯಮಗಮಿ ತೆತ್ಸುಯಾ (41) ಎಂಬಾತನನ್ನು ಜಪಾನ್ ಪೊಲೀಸರು ಬಂಧಿಸಿದ್ದು, ಆತನೇ ತಯಾರಿಸಿದ ಬಂದೂಕಿನಿಂದಲೇ ಗುಂಡಿನ ದಾಳಿ ನಡೆಸಿರುವುದು ಬಯಲಾಗಿದೆ. ಅಲ್ಲದೇ ದಾಳಿ ನಡೆಸಿದ ಮೇಲೆಯೂ ಈತ ತಪ್ಪಿಸಿಕೊಳ್ಳಲು ಯತ್ನಿಸದೇ, ಅಲ್ಲೇ ಬಂದೂಕು ಹಿಡಿದು ನಿಂತಿದ್ದವನನ್ನು ಗಮನಿಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಎರಡು ಬಾರಿ ಗುಂಡು ಹಾರಿಸಿದ್ದರಿಂದ ಗಾಯಗೊಂಡ ಶಿಂಜೊ ಅಬೆ ಹೃದಯ ಉಸಿರಾಟ ಸ್ತಂಭನಕ್ಕೊಳಗಾಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.