ಹೊಸದಿಲ್ಲಿ: ಕರ್ನಾಟಕದ ಮುಖ್ಯಮಂತ್ರಿ ನೇಮಕದ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ನಮ್ಮ ವೀಕ್ಷಕರು ಬೆಂಗಳೂರಿಗೆ ಹೋಗಿದ್ದಾರೆ, ನಂತರ ಸಿಎಲ್ಪಿ ಸಭೆ ನಡೆಯಲಿದೆ, ಸಿಎಲ್ಪಿ ಸಭೆಯ ನಂತರ ಅವರು ತಮ್ಮ ಅಭಿಪ್ರಾಯವನ್ನು ಹೈಕಮಾಂಡ್ ನೊಂದಿಗೆ ಹಂಚಿಕೊಳ್ಳುತ್ತಾರೆ, ನಂತರ ಅವರು (ಹೈಕಮಾಂಡ್) ತಮ್ಮ ನಿರ್ಧಾರವನ್ನು ಇಲ್ಲಿಂದ ಕಳುಹಿಸುತ್ತಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿರುವ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿ ಆಯ್ಕೆ ಕುರಿತು ಭಾನುವಾರ ಕಾಂಗ್ರೆಸ್ ಪಕ್ಷ ನಡೆಸಿದ್ದ ಶಾಸಕಾಂಗ ಸಭೆ ಅಂತ್ಯಗೊಂಡಿದ್ದು, ಶಾಸಕ ಅಭಿಪ್ರಾಯ ಸಹ ಸಂಗ್ರಹಿಸಲಾಗಿದೆ. ಅಲ್ಲದೇ ನಿಮ್ಮ ಬೆಂಬಲ ಯಾರಿಗೆ ಎನ್ನುವ ಅಭಿಪ್ರಾಯವನ್ನು ಶಾಸಕರ ಬಳಿ ಕೇಳಲಾಗಿದೆ. ಶಾಸಕರು ಸಿಎಂ ಯಾರಾಗಬೇಕೆಂದು ಗುಪ್ತ ಮತದಾನ ಮಾಡಿದ್ದಾರೆ.