ಮಲ್ಲಿಕಾರ್ಜುನ ಖರ್ಗೆಯನ್ನು ಸಿಎಂ ಮಾಡಿ: ಹೆಚ್.ಕೆ.ಕುಮಾರಸ್ವಾಮಿ ಆಗ್ರಹ

Prasthutha|

ಹಾಸನ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಬೇಕು ಎಂದು ಜೆಡಿಎಸ್ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಅನೇಕರು ಟವಲ್ ಹಾಕಿಕೊಂಡು ಕುಳಿತಿದ್ದಾರೆ. ದಲಿತ ಬಂಧುಗಳು ಬಹಳಷ್ಟು ವರ್ಷದಿಂದ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಆದರೂ ದಲಿತ ನಾಯಕರು ಯಾರೂ ಕೂಡ ಮುಖ್ಯಮಂತ್ರಿ ರೇಸ್‌ನಲ್ಲಿಲ್ಲ, ರೇಸ್‌ಗೆ ಬರಲು ಬಿಡ್ತಾ ಇಲ್ಲ. ಇದನ್ನು ದಲಿತರು ಅರ್ಥಮಾಡಿಕೊಳ್ಳಬೇಕು ಎಂದರು.

ನಮ್ಮ ಪಕ್ಷದವರು ಯಾವಾಗಲೂ ಸಿಎಂ ಹುದ್ದೆ ಬಗ್ಗೆ ಮಾತನಾಡಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗ್ತಾರೆ ಅಂತ ಜಗಜ್ಜಾಹೀರಾಗಿದ್ದು, ನಾವು ಬೆಂಬಲಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ 75 ವರ್ಷದಲ್ಲಿ 55 ವರ್ಷ ಆಡಳಿತ ಮಾಡಿದೆ. ಆದರೂ ಖರ್ಗೆ, ಕೆ.ಎಚ್.ರಂಗನಾಥ್, ಬಸವಲಿಂಗಪ್ಪ, ಬಿ.ರಾಚಯ್ಯ, ಎನ್.ರಾಚಯ್ಯ ಅವರಂತಹ ಘಟಾನುಘಟಿ ಲೀಡರ್‌ಗಳಿದ್ದರೂ ಅವರಿಗೆ ಅಧಿಕಾರ ಕೊಟ್ಟಿಲ್ಲ ಎಂದು ದೂರಿದರು.

- Advertisement -

ನಾನು ಬೇರೆ ಪಕ್ಷದ ಶಾಸಕನಾಗಿ ಹೇಳುತ್ತಿದ್ದೇನೆ. ಖರ್ಗೆ ಅವರಿಗೆ 80 ವರ್ಷ ತುಂಬಿದೆ, ಅವರ ಅನುಭವಕ್ಕಾದರೂ, ಅವರ ಹೆಸರು ಪ್ರಸ್ತಾಪ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಮತ ಕೊಡುವ ದಲಿತರನ್ನು ಕಡೆಗಣಿಸಿದೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ ಮಂತ್ರಿ, ಮುಖ್ಯಮಂತ್ರಿ ಮಾಡ್ತಿವಿ ಅಂತ ಹೇಳಲಿ ಎಂದು ಆಗ್ರಹಿಸಿದರು.



Join Whatsapp