ಶಿವಮೊಗ್ಗ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೈಬಣ್ಣ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಗ ಜ್ಞಾನೇಂದ್ರ ದೂರು ದಾಖಲಿಸಲಾಗಿದೆ. ದಲಿತ ಮುಖಂಡ ಹರ್ಷೇಂದ್ರ ಕುಮಾರ್ ಎನ್ನುವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆರಗ ಜ್ಞಾನೇಂದ್ರ ವಿರುದ್ಧ ಜಾತಿ ನಿಂದನೆ ದೂರು ನೀಡಿದ್ದಾರೆ.
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಿನ್ನೆ(ಆಗಸ್ಟ್ 02) ಶಿವಮೊಗ್ಗದ ಜಿಲ್ಲೆ ತೀರ್ಥಹಳ್ಳಿಯಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಮಾತನಾಡಿರೋ ಆರಗ ಜ್ಞಾನೇಂದ್ರ, ಅರಣ್ಯವೇ ಇಲ್ಲದ ಪ್ರದೇಶದವರು ಅರಣ್ಯ ಸಚಿವರಾಗುತ್ತಾರೆ. ಇದು ನಮ್ಮ ರಾಜ್ಯದ ದುರಂತ ಎಂದಿದ್ದಾರೆ. ಬೀದರ್ ಜಿಲ್ಲೆಯ ಈಶ್ವರ್ ಖಂಡ್ರೆ ಅರಣ್ಯ ಸಚಿವರಾಗಿರುವುದಕ್ಕೆ ಈ ಹೇಳಿಕೆ ನೀಡಿದ ಮಾಜಿ ಗೃಹ ಸಚಿವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಆ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಖರ್ಗೆ ಅವರನ್ನು ನೋಡಿದರೆ ಗೊತ್ತಾಗುತ್ತೆ ಎಂದು ನಾಲಗೆ ಹರಿಬಿಟ್ಟಿದ್ದರು. ಜ್ಞಾನೇಂದ್ರ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.