ಮಾಲೆಗಾಂವ್ ಸ್ಫೋಟ: ಪ್ರಜ್ಞಾ ಠಾಕೂರ್‌ಗೆ ವಾರಂಟ್ ಜಾರಿ ಮಾಡಿದ ಎನ್‌ಐಎ ವಿಶೇಷ ಕೋರ್ಟ್‌

Prasthutha|

ಮುಂಬೈ: ಬಿಜೆಪಿಯ ವಿವಾದಿತ ಸಂಸದೆ ಪ್ರಜ್ಞಾ ಠಾಕೂರ್‌ಗೆ ಎನ್‌ಐಎ ವಿಶೇಷ ಕೋರ್ಟ್‌ ವಾರಂಟ್ ಜಾರಿ ಮಾಡಿದೆ. ಜಾಮೀನು ಪಡೆಯಬಹುದಾದ ವಾರಂಟ್ ಇದಾಗಿದೆ.

- Advertisement -

2008ರಲ್ಲಿ ನಡೆದಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ಎಚ್ಚರಿಕೆ ನೀಡಿದರೂ ಪ್ರಜ್ಞಾ ಠಾಕೂರ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕಾರಣಕ್ಕೆ ಈ ವಾರಂಟ್ ಜಾರಿಗೊಳಿಸಲಾಗಿದೆ.

ಯುಎಪಿಎ ಅಡಿಯಲ್ಲಿ ಪ್ರಜ್ಞಾ ಠಾಕೂರ್‌ ಹಾಗೂ ಇತರ ಆರು ಮಂದಿ ಸ್ಫೋಟ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಎನ್‌ಐಎ ನ್ಯಾಯಾಲಯ ಆರೋಪಿಗಳ ಹೇಳಿಕೆಗಳನ್ನು ಅಪರಾಧ ಪ್ರಕ್ರಿಯಾ ಸಂಹಿತೆಯಡಿ (ಸಿಆರ್‌ಪಿಸಿ) ದಾಖಲಿಸಿಕೊಳ್ಳುತ್ತಿದೆ.

- Advertisement -

ವಿಶೇಷ ನ್ಯಾಯಮೂರ್ತಿ ಎ.ಕೆ. ಲಾಹೋಟಿ ಅವರು ಠಾಕೂರ್ ಅವರಿಗೆ ₹10 ಸಾವಿರ ಮೊತ್ತದೊಂದಿಗೆ ವಾರಂಟ್‌ ಜಾರಿಗೊಳಿಸಿದ್ದಾರೆ. ಅಲ್ಲದೆ, ಮಾರ್ಚ್ 20ರ ಹೊತ್ತಿಗೆ ವಿಚಾರಣೆಯ ಕುರಿತ ವರದಿಯನ್ನು ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಸೂಚಿಸಿದೆ.

ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದರೆ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಕಳೆದ ತಿಂಗಳೇ ಪ್ರಜ್ಞಾ ಠಾಕೂರ್ ಅವರಿಗೆ ಕೋರ್ಟ್ ಎಚ್ಚರಿಕೆ ನೀಡಿತ್ತು. ಆದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.



Join Whatsapp