PFI ನಿಷೇಧ ಖಂಡಿಸಿದ ಮಲೇಷ್ಯಾ ಇಸ್ಲಾಮಿಕ್ ಪರಿಷತ್ತು; ಇ.ಅಬೂಬಕರ್ ಮತ್ತು ಇತರರ ಬಿಡುಗಡೆಗೆ ಒತ್ತಾಯ

Prasthutha|

ನವದೆಹಲಿ: ಭಾರತದಲ್ಲಿ ಪಿಎಫ್’ಐ ನಿಷೇಧಿಸಿರುವುದನ್ನು ಖಂಡಿಸಿರುವ, ಮಲೇಷ್ಯಾದ ಇಸ್ಲಾಮಿಕ್ ಸಂಘಟನೆಗಳ ಮಾತೃ ಸಂಸ್ಥೆಯಾಗಿರುವ ಮಜ್ಲಿಸ್ ಪೆರುಂದಿಂಗನ್ ಪೆರ್ತುಬುಹಾನ್ ಇಸ್ಲಾಂ ಮಲೇಷ್ಯಾ ಅಂದರೆ ಮಲೇಷ್ಯಾದ ಇಸ್ಲಾಮಿಕ್ ಸಂಘಟನೆಗಳ ಸಲಹೆಗಾರ ಪರಿಷತ್ತು, ಪಿಎಫ್’ಐ ಮುಖಂಡ ಪಾರ್ಕಿನ್ಸನ್ ಮತ್ತು ಕ್ಯಾನ್ಸರ್ ಬಾಧಿತ ಇ.ಅಬೂಬಕರ್ ಮತ್ತಿತರ ಬಂಧಿತ ನಾಯಕರನ್ನು ಕೂಡಲೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

- Advertisement -

 ಹಿಂದಿನ ಪಾಪ್ಯುಲರ್ ಫ್ರಂಟ್ ಇಂಡಿಯಾದ ಅಧ್ಯಕ್ಷರಾದ ಇ. ಅಬೂಬಕರ್ ಅವರನ್ನು ದೆಹಲಿಯ ತಿಹಾರ್ ಸೆರೆಮನೆಯಲ್ಲಿ ಇರಿಸಿರುವುದಕ್ಕೆ ಪರಿಷತ್ತಿನ ಅಧ್ಯಕ್ಷರಾದ ಮುಹಮ್ಮದ್ ಅಜ್ಮಿ ಅಬ್ದುಲ್ ಹಮೀದ್ ಅವರು ತೀವ್ರ ನೋವು ಪ್ರಕಟಿಸಿದ್ದಾರೆ. 

“ತೀವ್ರ ಕಾಯಿಲೆಯಲ್ಲಿರುವ ಅಬೂಬಕರ್ ಅವರ ಚಿಕಿತ್ಸೆಗೆ ಅನುಕೂಲವಾಗುವಂತೆ ತಿಹಾರ್ ಜೈಲಿನಿಂದ ಗೃಹ ಬಂಧನಕ್ಕೆ ಒಳಪಡಿಸುವಂತೆ ಕೋರಿರುವ ಮನವಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿರುವುದು ವಿಷಾದನೀಯ. 70 ವರ್ಷದ ಮುಸ್ಲಿಂ ನಾಯಕನಿಗೆ ನ್ಯಾಯಬದ್ಧ ಚಿಕಿತ್ಸೆ ಸಿಗದಿರಲು ಇದು ಕಾರಣವಾಗಿದೆ. ಭಾರತದ ಕಠೋರ ಕಾಯ್ದೆ ಯುಎಪಿಎ- ಕಾನೂನುಬಾಹಿರ ಚಟುವಟಿಕೆ ತಡೆ, ಅಡಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ಸೆರೆಯಾಳು ವ್ಯಕ್ತಿಯ ಚಿಕಿತ್ಸೆ ಪಡೆಯುವ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಹಕ್ಕು ಇಲ್ಲ” ಎಂದು ಮುಹಮದ್ ಅಜ್ಮಿ ಅಬ್ದುಲ್ ಹಮೀದ್ ಹೇಳಿದ್ದಾರೆ.

- Advertisement -

ಪಿಎಫ್’ಐ ನಾಯಕ ಅಬೂಬಕರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯಲ್ಲಿ, ತಾನು ಕ್ಯಾನ್ಸರ್ ಕಾಯಿಲೆಯಲ್ಲಿ ಅಪರೂಪದ್ದಾದ ಗ್ಯಾಸ್ಟ್ರೋಸೋಪಾಜಿಲ್ ಜಂಕ್ಷನ್ ಎಡೆನೋಕಾರ್ಸಿನೋಮಾ ರೋಗಿಯಾಗಿದ್ದು, ಇದರೊಂದಿಗೆ ಪಾರ್ಕಿನ್ಸನ್ ವ್ಯಾಧಿ ಪೀಡಿತನೂ ಆಗಿರುವುದನ್ನು ತಿಳಿಸಿದ್ದರು.

ಅಬೂಬಕರ್ ಮತ್ತು ಪಿಎಫ್’ಐನ ನೂರಾರು ಮುಸ್ಲಿಂ ನಾಯಕರನ್ನು ಬಂಧಿಸಿ ದೇಶದ ನಾನಾ ಸೆರೆಮನೆಗಳಲ್ಲಿ ಕ್ರೂರ ಯುಎಪಿಎ ಕಾಯ್ದೆಯಡಿ ಇಡಲಾಗಿದೆ ಎಂದೂ ಅವರು ಹೇಳಿದರು.

“ನಾವು ಪಿಎಫ್’ಐ ನಿಷೇಧವನ್ನು ಮತ್ತು ಅದರ ಸಹ ಸಂಸ್ಥೆಗಳಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರಿಹಾಬ್ ಇಂಡಿಯಾ ಫೌಂಡೇಶನ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಮಾನವ ಹಕ್ಕುಗಳ ಒಕ್ಕೂಟದ ರಾಷ್ಟ್ರೀಯ ಕಾನ್ ಫೆಡರೇಶನ್, ರಾಷ್ಟ್ರೀಯ ಮಹಿಳಾ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ಕೇರಳ ರಿಹಬ್ ಫೌಂಡೇಶನ್ ಇವುಗಳೆಲ್ಲದರ ನಿಷೇಧ ಖಂಡಿಸುತ್ತೇವೆ” ಎಂದೂ ಅಬ್ದುಲ್ ಹಮೀದ್ ಹೇಳಿದರು.

ಸದರಿ ಸಂಘಟನೆಗಳನ್ನು ಕಾನೂನುಬಾಹಿರ ಸಂಘಟನೆಗಳು ಎಂದು ಘೋಷಿಸಿರುವುದನ್ನು ನಾವು ಆಕ್ಷೇಪಿಸುವುದಾಗಿಯೂ ಅವರು ಹೇಳಿದ್ದಾರೆ.

“ಉಗ್ರರಿಗೆ ಧನ ಸಹಾಯ ಎಂದು ಅವರ ಮೇಲೆ ಆರೋಪ ಹೊರಿಸಿರುವುದು ಶುದ್ಧ ರಾಜಕೀಯ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಕ್ಕಿಗಾಗಿ, ಸದ್ಯೋಭವಿಷತ್ತಿನಲ್ಲಿ ಅವರ ಹಕ್ಕುಗಳ ಮೇಲೆ ದಾಳಿಯ ವಿರುದ್ಧ ದನಿಯೆತ್ತಲು ಪ್ರಜಾಸತ್ತಾತ್ಮಕವಾಗಿ ರಚನೆಯಾದ ಸಂಘಟನೆಗಳಿವು. ಎಲ್ಲ ನ್ಯಾಯ ಬಯಸುವ ಜನರು ಅಲ್ಪಸಂಖ್ಯಾತರ ಹಕ್ಕುಗಳು ಸರಿಯಾಗಿ ದೊರೆಯುವಂತೆ ಮಾಡಬೇಕು ಅದಕ್ಕೆ ಒಕ್ಕೊರಲಿನಿಂದ ಧ್ವನಿ ಎತ್ತಬೇಕೆಂದು ನಾವು ಬಯಸುತ್ತೇವೆ” ಎಂದು ಅಬ್ದುಲ್ ಹಮೀದ್ ಹೇಳಿದರು.



Join Whatsapp