ಕೌಲಾಲಂಪುರ: ಡಿಸೆಂಬರ್ 7 ರಿಂದ ಆರಂಭವಾಗುವ ವಿಶ್ವ ಸ್ಕ್ವಾಷ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸದಂತೆ ಇಸ್ರೇಲ್ ಆಟಗಾರರಿಗೆ ನಿಷೇಧ ಹೇರಿದ ಮಲೇಷ್ಯಾ, ಈ ಸಂಬಂಧ ಆಟಗಾರರಿಗೆ ವೀಸಾ ನೀಡುವುದಿಲ್ಲ ಎಂದು ತಿಳಿಸಿದೆ.
ವಿಶ್ವ ಸ್ಕ್ವಾಷ್ ಫೆಡರೇಶನ್ (WSF) ಈ ಕುರಿತು ಪ್ರತಿಕ್ರಿಯಿಸಿ, ಪ್ರಸ್ತುತ ಮಲೇಷ್ಯಾ ಅಧಿಕಾರಿಗಳು ಇಸ್ರೇಲ್ ಸ್ಕ್ವಾಷ್ ತಂಡಕ್ಕೆ ವೀಸಾಗಳನ್ನು ನೀಡಲು ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿಸಿದೆ.
ಸದ್ಯ WSF, ಮಲೇಷ್ಯಾ ಸ್ಕ್ವ್ಯಾಷ್ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿದ್ದು, ಈ ಸಮಸ್ಯೆಯನ್ನು ನ್ಯಾಯಯುತ ಮತ್ತು ಪ್ರಾಯೋಗಿಕವಾಗಿ ಬಗೆಹರಿಸುವ ಭರವಸೆಯಿದೆ ಎಂದು ಮಾಹಿತಿ ನೀಡಿದೆ.
ಸದ್ಯ ಮಲೇಷ್ಯಾದಲ್ಲಿ ನಡೆಯುತ್ತಿರುವ ಪಂದ್ಯಾವಳಿಯನ್ನು ನ್ಯೂಝಿಲೆಂಡ್ ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್ ಹರಡುವುದನ್ನು ತಡೆಗಟ್ಟಲು ನ್ಯೂಝಿಲೆಂಡ್ ನಲ್ಲಿ ವಿಧಿಸಲಾಗಿರುವ ನಿರ್ಬಂಧದ ಕಾರಣ ಮಲೇಷ್ಯಾಕ್ಕೆ ಸ್ಥಳಾಂತರಿಸಲಾಗಿತ್ತು.
ಮಲೇಷ್ಯಾ ಇಸ್ರೇಲ್ ನೊಂದಿಗೆ ಯಾವುದೇ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ ಮತ್ತು ಯಹೂದಿ ದೇಶದ ಜನರು ಆಗ್ನೇಯ ಏಷ್ಯಾದ ದೇಶಕ್ಕೆ ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿತ್ತು.
ಈ ಬೆಳವಣಿಗೆಯಿಂದ ಮಲೇಷ್ಯಾ ವಿರುದ್ಧ ಕೆಂಡಾಮಂಡಲವಾಗಿರುವ ಇಸ್ರೇಲ್, ವರ್ಲ್ಡ್ ಸೋಶಿಯಲ್ ಫೋರಮ್ ಈ ಬಿಕ್ಕಟ್ಟನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ಸ್ವಿಟ್ಜರ್ಲೆಂಡ್ ನಲ್ಲಿ ಕ್ರೀಡೆಗಾಗಿ ಕೋರ್ಟ್ ಮೆಟ್ಟಿಲೇರಲು ಯೋಜನೆ ಹಾಕಿಕೊಂಡಿದೆ ಎಂದು ಇಸ್ರೇಲ್ ಸ್ಕ್ವಾಷ್ ಅಸೋಸಿಯೇಷನ್ ಅಧ್ಯಕ್ಷ ಅವಿವ್ ಬುಶಿನ್ಸ್ಕಿ ತಿಳಿಸಿದ್ದಾರೆ. ಮಾತ್ರವಲ್ಲ ಕ್ರೀಡೆಯನ್ನು ರಾಜಕೀಯದೊಂದಿಗೆ ಬೆರೆಸುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ತಿಳಿಸಿದರು.
ಈ ಮಧ್ಯೆ ಮಲೇಷ್ಯಾ ನಡೆಗೆ ಫೆಲೆಸ್ತೀನ್ ಮೂಲದ ಹಮಾಸ್ ಸಂಘಟನೆ ಪ್ರಶಂಸೆ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಮಾಸ್ ವಕ್ತಾರ ಅಬ್ದ್ ಅಲ್-ಲತೀಫ್ ಅಲ್-ಕಾನು, ಇಸ್ರೇಲ್ ವಿರುದ್ಧದ ಮಲೇಷ್ಯಾದ ನಡೆ ಪ್ರಶಂಸನೀಯ ಎಂದು ತಿಳಿಸಿದರು. ಮಾತ್ರವಲ್ಲ ಇದು ಮಲೇಷ್ಯಾದ ಸ್ಥಿರತೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದರ
ಮಲೇಷ್ಯಾದ ದಿಟ್ಟ ನಡೆಗೆ ನೆಟ್ಟಿಗರು ಶ್ಲಾಘಿಸಿದ್ದು, ಇಸ್ರೇಲಿ ಆಕ್ರಮಣದೊಂದಿಗೆ ಅರಬ್ ದೇಶಗಳು ಕೈಜೋಡಿಸಿರುವುದನ್ನು ಖಂಡಿಸಿದ್ದಾರೆ.