ಮಲಯಾಳಂನ ಜನಪ್ರಿಯ ಹಾಸ್ಯನಟ ಇನ್ನೋಸೆಂಟ್ ಇನ್ನಿಲ್ಲ

Prasthutha|

ತಿರುವನಂತಪುರಂ: ಮಲಯಾಳಂನ ಜನಪ್ರಿಯ ಹಾಸ್ಯನಟ ಹಾಗೂ ಮಾಜಿ ಸಂಸದ ಇನ್ನೋಸೆಂಟ್(75) ನಿಧನರಾಗಿದ್ದಾರೆ.

- Advertisement -

ಉಸಿರಾಟದ ತೊಂದರೆಯಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು(ಭಾನುವಾರ) ರಾತ್ರಿ 10.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದೆ.

ಅವರಿಗೆ 2012ರಲ್ಲಿ ಗಂಟಲಿನಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ 2015ರಲ್ಲಿ ತಾನು ಸಂಪೂರ್ಣ ಗುಣಮುಖನಾಗಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.
ಕ್ಯಾನ್ಸರ್‌ನಿಂದ ಗುಣಮುಖರಾದಾಗಿನಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿರುವ ಜನರಿಗೆ ಬೆಂಬಲ ಮತ್ತು ಸಾಂತ್ವನವನ್ನು ನೀಡುತ್ತಾ ಬಂದಿದ್ದರು. ‘ಕ್ಯಾನ್ಸರ್ ವಾರ್ಡಿಲ್ ಚಿರಿ’ (ಕ್ಯಾನ್ಸರ್ ವಾರ್ಡ್‌ನಲ್ಲಿ ನಗು) ಎಂಬ ಪುಸ್ತಕವನ್ನು ಬರೆದ ಅವರು ಕ್ಯಾನ್ಸರ್ ರೋಗವನ್ನು ಎದುರಿಸಿದ ಅನುಭವಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ.

- Advertisement -

ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲೂ ಕೂಡ ಸಕ್ರಿಯರಾಗಿದ್ದ ಅವರು, 1979ರಲ್ಲಿ ಇರಿಂಜಲಕ್ಕುಡ ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. 2014ರ ಲೋಕಸಭಾ ಚುನಾವಣೆಯಲ್ಲಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF) ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇನ್ನೋಸೆಂಟ್, ಚಾಲಕುಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಆಯ್ಕೆಯಾದರು. ಇನ್ನೋಸೆಂಟ್ ಅವರು 2003 ರಿಂದ 2018 ರವರೆಗೆ ಮಲಯಾಳಂ ಕಲಾವಿದರ ಸಂಘವಾದ ಅಸೋಸಿಯೇಷನ್ ಆಫ್ ದ ಮಲಯಾಳಂ ಮೂವಿ ಆರ್ಟಿಸ್ಟ್‌ಸ್ (AMMA) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು.

ಇನ್ನೋಸೆಂಟ್ ಅವರು ಕೊನೆಯದಾಗಿ ಪೃಥ್ವಿರಾಜ್ ಅಭಿನಯದ ‘ಕಡುವ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.



Join Whatsapp