ಮಂಡ್ಯ: ಲಂಚ ಸ್ವೀಕರಿಸುತ್ತಿದ್ದ ವೇಳೆ ಪುರಸಭೆ ಅಧಿಕಾರಿಯೊಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪುರಸಭೆ ಸಮುದಾಯ ವ್ಯವಹಾರ ಅಧಿಕಾರಿ ಆರ್.ನಾಗೇಂದ್ರ ಎಂಬುವವರು 1.20 ಲಕ್ಷ ರೂ. ಲಂಚ ಕ್ಕೆ ಬೇಡಿಕೆ ಇಟ್ಟು, 40,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿಕಲಚೇತನರಿಗೆ ನೀಡಿದ್ದ ವಾಹನದ ಹಣ ಬಿಡುಗಡೆಗೆ ಹಾವೇರಿ ಮೂಲದ ಶಿವರಾಜ್ ಹೊಳ್ಳಾಲ್ ಎಂಬವರ ಹತ್ತಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಮಂಡ್ಯ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶ್ರೀರಂಗಪಟ್ಟಣ ಪುರಸಭೆ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
7 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸರ್ವೆ ಅಧಿಕಾರಿ ಲೋಕಾಯುಕ್ತ ಬಲೆಗೆ
ಬೆಂಗಳೂರು ನಗರದ ಕೆ.ಆರ್.ಪುರಂನ ಪೂರ್ವ ತಾಲೂಕು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಸರ್ವೆ ಅಧಿಕಾರಿ ಮೂರ್ತಿ ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಮೀನಿನ ಸರ್ವೆ ಮಾಡಲು ರೈತನಿಂದ 7 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸರ್ವೆ ಅಧಿಕಾರಿ ಮೂರ್ತಿ ನಾಯಕ್ ಅವರನ್ನು ಲೋಕಾಯುಕ್ತ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮೂರ್ತಿ ನಾಯಕ್ನನ್ನು ವಿಚಾರಣೆ ನಡೆಸಲಾಗುತ್ತಿದೆ.