ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ: ಎಂ.ಬಿ. ಪಾಟೀಲ್‌

Prasthutha|

ಬೆಂಗಳೂರು: ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾಗಿರುವ ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು, ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿ ಮಾಡಲಾಗುವುದು. ಇದಕ್ಕಾಗಿ ಉದ್ಯಮ ಪರಿಣತರಿಂದ ಸಲಹೆಗಳನ್ನು ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ. ಆಸಕ್ತರು [email protected]ಗೆ ತಮ್ಮ ಸಲಹೆಗಳನ್ನು ಕಳಿಸಬಹುದು.

- Advertisement -

ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿರುವ ಅವರು, “ಮೈಸೂರು ಸ್ಯಾಂಡಲ್‌ ಸೋಪ್‌, ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍‌ ಅವರು ಆರಂಭಿಸಿದ ಉತ್ಪನ್ನವಾಗಿದೆ. ಅದು ರಾಜ್ಯದ ಮಕುಟಮಣಿಯ ಅನರ್ಘ್ಯರತ್ನವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಈ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಉದ್ಯಮಿಗಳು ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ಕೊಟ್ಟು, ಸರ್ಕಾರದ ಈ ಪ್ರಯತ್ನಕ್ಕೆ ಕೈಗೂಡಿಸಬೇಕು” ಎಂದು ಸಚಿವರು ಆಹ್ವಾನಿಸಿದ್ದಾರೆ. 

ಮೈಸೂರು ಸ್ಯಾಂಡಲ್‌ ಸೋಪ್‌ ರಾಜ್ಯದ ಸಾಬೂನು ಮಾರುಕಟ್ಟೆಯಲ್ಲೂ ಸಿಂಹಪಾಲು ಹೊಂದಿಲ್ಲ. ಹಾಗೆಯೇ, ಈ ಬ್ರ್ಯಾಂಡ್‌ ಉತ್ಪನ್ನವು ದಕ್ಷಿಣ ಭಾರತಕ್ಕಷ್ಟೇ ಸೀಮಿತವಾಗಿದೆ. ಮಾರುಕಟ್ಟೆಯಲ್ಲಿ ಉಳಿದ ಹೆಸರಿನ ಸಾಬೂನುಗಳು ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಜೊತೆಗೆ ಒಟ್ಟು ವಹಿವಾಟಿನಲ್ಲಿ 3% ರಷ್ಟು ಮಾತ್ರ ರಫ್ತು ವಹಿವಾಟಿನ ಮೂಲಕ ಬರುತ್ತಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.

- Advertisement -

 ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಯುಗವಾಗಿದೆ. ನಮ್ಮ ಬಳಿ ಮೈಸೂರು ಸ್ಯಾಂಡಲ್‌ ಸೋಪ್‌ನಂತಹ ಉತ್ಕೃಷ್ಟ ಉತ್ಪನ್ನವಿದ್ದೂ ನಾವು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ಈ ನಿರಾಶಾದಾಯಕ ಪರಿಸ್ಥಿತಿಯನ್ನು ನಿವಾರಿಸಲು ಸರ್ಕಾರ ಉತ್ಸುಕವಾಗಿದೆ. ಒಟ್ಟಿನಲ್ಲಿ ರಾಜ್ಯದ ಈ ಹೆಮ್ಮೆಯ ಉತ್ಪನ್ನಕ್ಕೆ ಮರುಜೀವ ತುಂಬಿ, ಮಾರುಕಟ್ಟೆಯನ್ನು ಸೃಷ್ಟಿಸಲು ಹಲವು ಉಪಕ್ರಮಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.



Join Whatsapp