ಡಾರ್ಜಿಲಿಂಗ್: ಲೋಕಸಭಾ ಸದಸ್ಯತ್ವದಿಂದ ತೃಣ ಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೋಯಿತ್ರಾ ಉಚ್ಚಾಟನೆಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ, ಇದು ದ್ರೋಹದ ಕೆಲಸ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಮಮತಾ, ಇವತ್ತಿನ ಘಟನೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಂದು ದೊಡ್ಡ ಕಪ್ಪು ಚುಕ್ಕೆ. ಏನೇ ಆದರೂ ನಾವು ಮಹುವಾ ಜೊತೆ ಇರುತ್ತೇವೆ. ನಮ್ಮನ್ನು ಚುನಾವಣೆಯಲ್ಲಿ ಸೋಲಿಸಲು ಆಗುವುದಿಲ್ಲ ಎಂದು ಹತಾಶೆಗೊಂಡ ಬಿಜೆಪಿಯವರು ಈ ರೀತಿ ಮಾಡಿದ್ದಾರೆ ಎಂದು ಕಿಡಿಗಾರಿದ್ದಾರೆ.
ಬಿಜೆಪಿಯು ಈ ಮೂಲಕ ಜನರ ತೀರ್ಪನ್ನು ಕೆಡವುತ್ತಿದೆ. ನೋಡುತ್ತಿರಿ, ಮೋಯಿತ್ರಾ ಮತ್ತೆ ಚುನಾವಣೆಯಲ್ಲಿ ದೊಡ್ಡ ಬಹುಮತದೊಂದಿಗೆ ಗೆದ್ದು ಲೋಕಸಭೆಗೆ ಹೋಗುತ್ತಾರೆ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮನ್ನು ಉಚ್ಚಾಟನೆ ಮಾಡಿರುವ ಬಗ್ಗೆ ಮಹುವಾ ಮೋಯಿತ್ರಾ ಕಾಂಗರೂ ನ್ಯಾಯಾಲಯವೊಂದು ನೇಣು ಶಿಕ್ಷೆ ವಿಧಿಸಿದಂತಿದೆ ಎಂದು ಪ್ರತಿಕ್ರಿಯಿಸಿದ್ದರು.
ಮಹುವಾ ಅವರು ತಮ್ಮ ಸಂಸತ್ ಸದಸ್ಯತ್ವದ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಂಡು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡಿದ್ದಾರೆ ಎಂದು ಆರೋಪಿಸಿದ್ದ ಲೋಕಸಭೆಯ ನೀತಿ ಸಮಿತಿ ಮಹುವಾರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿತ್ತು. ಅದಕ್ಕೆ ಸಂಬಂಧಿಸಿದ 495 ಪುಟಗಳ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಿತ್ತು.