ನಾಳೆ ಮಹಿಳಾ ಕಾಂಗ್ರೆಸ್’ನಿಂದ ಕುಸ್ತಿಪಟುಗಳ ಪರವಾಗಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ: ಪುಷ್ಪಾ ಅಮರನಾಥ್

Prasthutha|

ಬೆಂಗಳೂರು: ದೇಶದಲ್ಲಿ ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ ಮಹಿಳೆಯರ ರಕ್ಷಣೆ ಇಲ್ಲವಾಗಿದೆ. ಭೇಟಿ ಬಚಾವೋ ಭೇಟಿ ಎನ್ನುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಮಹಿಳೆಯರ ರಕ್ಷಣೆ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಹೆಮ್ಮೆಯ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದು, ಅವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಇದುವರೆಗೂ ಒಂದು ಬಾರಿಯೂ ಪ್ರತಿಭಟನಾ ನಿರತ ಮಹಿಳಾ ಕುಸ್ತಿಪಟುಗಳನ್ನು ಭೇಟಿ ಮಾಡುತ್ತಿಲ್ಲ.ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಸಂಸದೆ ಮಿನಾಕ್ಷಿ ಲೇಖಿ, ಕೇಂದ್ರದ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಈ ಹೋರಾಟ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ ಅವರು, ದೇಶದ ರಾಷ್ಟ್ರಪತಿ ಮಹಿಳೆಯಾಗಿದ್ದು, ಅವರನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದರು. ಭಾರತೀಯ ಕುಸ್ತಿ ಸಂಸ್ಥೆ ಅಧ್ಯಕ್ಷ ಬ್ರಿಜ್ ಭೂಷಣ್ ಅವರು ಸಂಸದರಾಗಿದ್ದು, ಅವರ  ಮೇಲೆ ಲೈಂಗಿಕ ಕಿರುಕುಳದ ಆರೋಪವಿದ್ದು, ಅವರ ರಕ್ಷಣೆಗೆ ಇಡೀ ಬಿಜೆಪಿ ಸರ್ಕಾರ ಮುಂದಾಗಿದೆ. ಈ ಪ್ರಕರಣದ ನಂತರ ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆ ಭಾರತವನ್ನು ನಿಷೇಧಿಸುವ ಎಚ್ಚರಿಕೆಯನ್ನು ನೀಡಿದೆ. ಆದರೂ ಬಿಜೆಪಿ ಸರ್ಕಾರ ಹಾಗೂ ಪ್ರಧಾನಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.  ಮಹಿಳಾ ಕಾಂಗ್ರೆಸ್ ವತಿಯಿಂದ ನಮ್ಮ ಮಹಿಳಾ ಕುಸ್ತಿಪಟುಗಳ ಪರವಾಗಿ ಧ್ವನಿ ಎತ್ತುತ್ತಿದ್ದು, ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ನಾಳೆ ಜಿಲ್ಲಾ ಕೇಂದ್ರಗಳಲ್ಲಿ ಈ ವಿಚಾರವಾಗಿ ಧ್ವನಿ ಎತ್ತಲಾಗುವುದು. ಮಹಿಳಾ ಕುಸ್ತಿಪಟುಗಳ ಜತೆ ನಾವು ಇದ್ದೇವೆ ಎಂದು ಸಂದೇಶ ರವಾನಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಕುಸ್ತಿಪಟುಗಳ ಪರವಾಗಿ ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಕ್ರೀಡಾ ತಾರೆಯರು ಧ್ವನಿ ಎತ್ತುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರೂ ಪೊಲೀಸರ ಮೂಲಕ ಅವರ ಮೇಲೆ ದಬ್ಬಾಳಿಕೆ ಮಾಡಿ ಬಂಧಿಸಲಾಗಿದೆ. ಈ ಮಹಿಳಾ ವಿರೋಧಿ ಬಿಜೆಪಿ ಸರ್ಕಾರ ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಅವರನ್ನು ಜೈಲಿಗೆ ಕಳುಹಿಸುವ ಬದಲು, ಹೋರಾಟನಿರತ ಮಹಿಳಾ ಕುಸ್ತಿಪಟುಗಳನ್ನು ಬಂಧಿಸಿದೆ. ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ.ಕೇಂದ್ರ ಸರ್ಕಾರ ಜೀವಂತವಾಗಿದ್ದರೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬ್ರಿಜ್ ಭೂಷಣ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

- Advertisement -

ಸರ್ಕಾರದ ಈ ದಬ್ಬಾಳಿಕೆಗೆ ಬೇಸತ್ತು ಮಹಿಳಾ ಕುಸ್ತಿಪಟುಗಳು ತಾವು ಗೆದ್ದಿರುವ ಪದಕಗಳನ್ನು ಗಂಗಾನದಿಗೆ ಎಸೆಯಲು ಮುಂದಾಗಿದ್ದಾರೆ. ಇದಕ್ಕಿಂತ ದೊಡ್ಡ ಅಪಮಾನ ಬೇರೆ ಇಲ್ಲ. ಈ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕು ಎಂದು ನಾವು ಆಗ್ರಹಿಸುತ್ತೇವೆ. ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗುತ್ತಿದೆ. ಈ ಕುಸ್ತಿಪಟುಗಳು ಪದಕ ಗೆದ್ದಾಗ ಅವರ ಜತೆ ಫೋಟೋ ತೆಗೆಸಿಕೊಂಡು ಪ್ರಧಾನಮಂತ್ರಿಗಳು ಪ್ರಚಾರ ಪಡೆಯುತ್ತಾರೆ. ಅದೇ ಕ್ರೀಡಾಪಟುಗಳು ದೌರ್ಜನ್ಯಕ್ಕೆ ಒಳಾಗಾಗಿರುವಾಗ ಅವರಿಗೆ ಸಾಂತ್ವಾನ ಹೇಳುವುದಿರಲಿ, ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆ ಕೂಡ ಮಾಡುತ್ತಿಲ್ಲ. ಇದು ದೇಶಕ್ಕೆ ಕಪ್ಪುಚುಕ್ಕೆಯಾಗಿದೆ ಎಂದರು.



Join Whatsapp