ಮಹಾರಾಷ್ಟ್ರ | ಹಲೋ ಬದಲಿಗೆ ವಂದೇ ಮಾತರಂ ಕಡ್ಡಾಯ; ರಾಜಕೀಯ ವಲಯದಲ್ಲಿ ಆಕ್ರೋಶ

Prasthutha|

ಮುಂಬೈ: ಸರಕಾರಿ ಮತ್ತು ಅನುದಾನಿತ ಸಂಸ್ಥೆಗಳ ಉದ್ಯೋಗಿಗಳು ದೂರವಾಣಿ ಕರೆಗಳಿಗೆ ಉತ್ತರಿಸುವಾಗ “ಹಲೋ” ಬದಲು “ವಂದೇ ಮಾತರಂ ಹೇಳುವುದನ್ನು ಮಹಾರಾಷ್ಟ್ರ ಸರ್ಕಾರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರ ಸರ್ಕಾರದ ಈ ಆದೇಶ ರಾಜ್ಯ ರಾಜಕೀಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಈ ಆದೇಶ ಹೊರಡಿಸಿದೆ. ಸರ್ಕಾರಿ, ಅರೆ ಸರ್ಕಾರಿ, ಸ್ಥಳೀಯ ನಾಗರಿಕ ಸಂಸ್ಥೆಗಳು, ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಇತರ ಸಂಸ್ಥೆಗಳ ನೌಕರರಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶದನ್ವಯ ಎಲ್ಲಾ ಉದ್ಯೋಗಿಗಳು ಇನ್ನು ಮುಂದೆ ‘ವಂದೇ ಮಾತರಂ’ ಮೂಲಕ ಫೋನ್ ಕರೆಗಳಿಗೆ ಉತ್ತರಿಸಲು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡುವಾಗ, ನಾಗರಿಕರೊಂದಿಗೆ ಮಾತನಾಡುವಾಗ ಅಥವಾ ಸಾರ್ವಜನಿಕ ಪ್ರಕಟಣೆಗಳನ್ನು ಮಾಡುವಾಗ ಸಾಂಪ್ರದಾಯಿಕವಾಗಿ ಬಳಸುವ ಹಲೋ ಬದಲಿಗೆ ‘ವಂದೇ ಮಾತರಂ’ ಕಡ್ಡಾಯಗೊಳಿಸಿದೆ.

- Advertisement -

ಮುಂಬೈನ ವಾರ್ಧಾದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಇದಕ್ಕೆ ಚಾಲನೆ ನೀಡಿದರು.

ಸರ್ಕಾರದ ನಡೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಅಧ್ಯಕ್ಷ ಅಬು ಆಸೀಮ್ ಅಝ್ಮಿ, ಸರ್ಕಾರದ ಈ ಕ್ರಮ ಒಪ್ಪಲಾಗದು. “ನಾವು ‘ಸಾರೆ ಜಹಾನ್ ಸೆ ಅಚ್ಚಾ’ ಎಂದು ಅಭಿನಂದಿಸಲು ಬಯಸುತ್ತೇವೆಯೇ ಹೊರತು ‘ವಂದೇ ಮಾತರಂ’ ಅಲ್ಲ. ಅಲ್ಲದೆ ಮುಸ್ಲಿಮರು ‘ವಂದೇ ಮಾತರಂ’ ಅನ್ನು ಉಚ್ಚರಿಸಲು ಸಾಧ್ಯವಿಲ್ಲ, ಏಕೆಂದರೆ ಅದು ಅವರ ನಂಬಿಕೆಗೆ ವಿರುದ್ಧವಾಗಿದೆ” ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯ ಒತ್ತಡದ ಮೇರೆಗೆ ಶಿಂಧೆ ‘ಜೈ ಮಹಾರಾಷ್ಟ್ರ’ ತ್ಯಜಿಸಿ ‘ವಂದೇ ಮಾತರಂ’ ಕೈಗೆತ್ತಿಕೊಂಡಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಲಿ ಎಂದು ಅಜ್ಮಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಅವರು ಪ್ರತಿಕ್ರಿಯಿಸಿ, ‘ವಂದೇ ಮಾತರಂ’ ಶುಭಾಶಯವನ್ನು ವಿರೋಧಿಸುವುದಿಲ್ಲ, ಕಾಂಗ್ರೆಸ್ ‘ಜೈ ಕಿಸಾನ್’ ಅಥವಾ ‘ರಾಮ್ ರಾಮ್’ಗೆ ಆದ್ಯತೆ ನೀಡುತ್ತದೆ ಎಂದು ತಿಳಿಸಿದರು.



Join Whatsapp