ಮುಂಬೈ: ಅಂತರ್ ಜಾತಿ, ಅಂತರ್ ಧರ್ಮೀಯ ವಿವಾಹಗಳ ವಿವರಗಳನ್ನು ಸಂಗ್ರಹಿಸಲು ಮಹಾರಾಷ್ಟ್ರ ಸರ್ಕಾರವು 13 ಸದಸ್ಯರ ಸಮಿತಿಯೊಂದನ್ನು ರಚಿಸಿದೆ.
ಮಹಾರಾಷ್ಟ್ರದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಪ್ರಭಾತ್ ಲೋಧಾ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ‘ಅಂತರ್ ಧರ್ಮೀಯ ವಿವಾಹ – ಕುಟುಂಬ ಸಮನ್ವಯ ಸಮಿತಿ’ ರಚನೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.
ಅಂತರ್ ಧರ್ಮೀಯ ವಿವಾಹವಾದ ಜೋಡಿ ಹಾಗೂ ಅವರ ಕುಟುಂಬದವರ ಬಗ್ಗೆ ನಿಗಾ ವಹಿಸುವುದು, ಮಾಹಿತಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಈ ಸಮಿತಿಯ ಜವಾಬ್ದಾರಿಯಾಗಿರಲಿದೆ.
ರಾಜ್ಯ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಈ ಆದೇಶ ಹೊರಡಿಸಿದೆ. ಈ ಸಮಿತಿಯಲ್ಲಿ ಸಚಿವ ಲೋಧಾ ಇರಲಿದ್ದು, ಇಲಾಖೆಯ ಉಪ ಆಯುಕ್ತರು, ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
ಅಂತರ್ ಧರ್ಮೀಯ ಜೋಡಿಗಳು ಓಡಿ ಹೋದ ಬಳಿಕ ಅಥವಾ ಧಾರ್ಮಿಕ ಸ್ಥಳಗಳಲ್ಲಿ ನಡೆದ ನೋಂದಾಯಿತ ಅಥವಾ ನೋಂದಾಯಿಸದೇ ಇರುವ ವಿವಾಹಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ವಿವಾಹವಾಗುವ ಜೋಡಿಗಳಿಗೆ ಸಹಾಯವಾಣಿ ಕೂಡ ತೆರೆಯಲಾಗುತ್ತದೆ. ಒಂದು ವೇಳೆ ಅಂತರ್ ಧರ್ಮೀಯ ವಿವಾಹವಾಗಬಯಸುವ ಮಹಿಳೆಗೆ ಕೌನ್ಸೆಲಿಂಗ್ ಅಗತ್ಯ ಇದ್ದರೂ ನೀಡಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಸಮಿತಿಯ ನೇತೃತ್ವ ವಹಿಸಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ, ಶ್ರದ್ಧಾ ವಾಕರ್ ಪ್ರಕರಣ ಮರುಕಳಿಸದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಇದೊಂದು ವಿಫಲ ಯತ್ನ, ಏಕನಾಥ್ ಶಿಂಧೆ-ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಜನರ ಖಾಸಗಿ ಜೀವನದ ಮೇಲೆ ಗೂಢಚರ್ಯೆ ಮಾಡುವ ಹಕ್ಕು ಇಲ್ಲ ಎಂದು ಹೇಳಿದೆ.