ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ನಕ್ಸಲರನ್ನು ವಿವಿಧ ನಕ್ಸಲ್ ಸಮಿತಿಗಳ ಕಾರ್ಯದರ್ಶಿಗಳಾದ ವರ್ಗೀಶ್, ಮಾಗ್ತು ಮತ್ತು ಪ್ಲಾಟೂನ್ ಸದಸ್ಯರಾದ ಕುರ್ಸಂಗ್ ರಾಜು ಮತ್ತು ಕುಡಿಮೆಟ್ಟ ವೆಂಕಟೇಶ್ ಎಂದು ಗುರುತಿಸಲಾಗಿದೆ. ಇವರನ್ನು ಹಿಡಿದುಕೊಟ್ಟವರಿಗೆ ₹36 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉದ್ದೇಶದಿಂದ ಕೆಲ ನಕ್ಸಲರು ನೆರೆಯ ತೆಲಂಗಾಣದಿಂದ ಪ್ರಾಣಹಿತ ನದಿ ದಾಟಿ ಗಡ್ಚಿರೋಲಿಗೆ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಸೋಮವಾರ ಮಧ್ಯಾಹ್ನ ಪೊಲೀಸರಿಗೆ ಲಭಿಸಿತ್ತು.
ಹೀಗಾಗಿ ಮಹಾರಾಷ್ಟ್ರ ಪೊಲೀಸರ ವಿಶೇಷ ಸಿ-60 ಕಮಾಂಡೋಗಳು ಮತ್ತು ಸಿಆರ್ಪಿಎಫ್ ಕಮಾಂಡೋಗಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.