ಹೊಸದಿಲ್ಲಿ: NDA ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದನ್ನ ವಿರೋಧಿಸಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಕಲ್ಯಾಣ ಕ್ಷೇತ್ರದ ಸಂಸದರೂ ಆಗಿರುವ ಶ್ರೀಕಾಂತ್ ಶಿಂಧೆ ಹನುಮಾನ್ ಚಾಲೀಸಾ ಪಠಿಸುವ ಮೂಲಕ, ಉದ್ಧವ್ ಠಾಕ್ರೆ ಬಣಕ್ಕೆ ತಿರುಗೇಟು ನೀಡಿದ್ದಾರೆ.
ಅಲ್ಲದೇ ಸಿಎಂ ಖುರ್ಚಿಯ ಆಸೆಗಾಗಿ ಉದ್ಧವ್ ಠಾಕ್ರೆ ಅವರು ಭಾಳ್ ಸಾಹೇಬ್ ಅವರ ಸಿದ್ಧಾಂತ, ಹಿಂದುತ್ವ ಸಿದ್ಧಾಂತವನ್ನೇ ಮರೆತರು. ಅಧಿಕಾರಕ್ಕಾಗಿ ಉದ್ಧವ್ ಠಾಕ್ರೆ ಬಣದ ಹಿಂದುತ್ವ ಮತ್ತು ಬಾಳ ಠಾಕ್ರೆ ಅವರ ಸಿದ್ಧಾಂತವನ್ನೇ ಮೂಲೆಗುಂಪು ಮಾಡಿದೆ ಎಂದು ಟೀಕಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮಗ ಶ್ರೀಕಾಂತ್ ಶಿಂಧೆ ಮಹಾರಾಷ್ಟ್ರದ ಕಲ್ಯಾಣ ಲೋಕಸಭಾ ಕ್ಷೇತ್ರದ ಸಂಸದರು. ಪ್ರಧಾನಿ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ INDIA (ಇಂಡಿಯಾ) ಮೈತ್ರಿ ಕೂಟದ ವಿರುದ್ಧ ಎನ್‌ಡಿಎ ಅಂಗ ಪಕ್ಷವಾಗಿರುವ ಶಿವಸೇನೆಯ ಶಿಂಧೆ ಬಣ ಸಮರ ಸಾರಿದೆ. ಅದರಲ್ಲೂ ಉದ್ಧವ್ ಠಾಕ್ರೆ ಬಣದ ಸಂಸದರ ವಿರುದ್ಧ ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ ಶ್ರೀಕಾಂತ್ ಶಿಂಧೆ, ಹನುಮಾನ್ ಚಾಲೀಸಾ ಪಠಿಸುತ್ತಲೇ ತಿರುಗೇಟು ನೀಡಿದ್ದಾರೆ.
ಮುಂದುವರಿದು ಮಾತನಾಡುತ್ತಾ, ಈ ಹಿಂದೆ ಇದ್ದ ಯುಪಿಎ ಮೈತ್ರಿ ಕೂಟದ ಹೆಸರನ್ನೇ ಇಂಡಿಯಾ ಎಂದು ಬದಲಿಸಲಾಗಿದೆ. ಯುಪಿಎ ಮೈತ್ರಿ ಕೂಟ ಭ್ರಷ್ಟಾಚಾರಕ್ಕೆ ಸಮಾನಾರ್ಥಕ ಪದದಂತೆ ಇತ್ತು. ಹೀಗಾಗಿ, ಇಂಡಿಯಾ ಎಂದು ಬದಲಾಯಿಸಲಾಗಿದೆ. ಅಷ್ಟೇ ಅಲ್ಲ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ವರ್ಸಸ್ ಐಎನ್‌ಡಿಐಎ ನಡುವಣ ಸಮರ ಎಂದು ಬಿಂಬಿಸಲಾಗುತ್ತಿದೆ. ಅಸಲಿಗೆ ಇದನ್ನ ಯೋಜನೆಗಳು ವರ್ಸಸ್ ಹಗರಣಗಳ ವಿರುದ್ಧದ ಸಮರ ಎಂದು ಬಿಂಬಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
2019ರಲ್ಲಿ ಶಿವಸೇನೆಯು ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದ್ರೆ, ಚುನಾವಣೆ ಬಳಿಕ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಕೈ ಜೋಡಿಸಿ ಮಹಾರಾಷ್ಟ್ರ ಜನತೆಗೆ ಮೋಸ ಮಾಡಿತು. ಇದರ ಪ್ರತಿಫಲವಾಗಿ ಮೈತ್ರಿ ಕೂಟವೇ ಕುಸಿದು ಬಿದ್ದಿದ್ದಷ್ಟೇ ಅಲ್ಲ, ಶಿವಸೇನೆಯು ಎರಡು ಹೋಳಾಯ್ತು ಎಂದು ಶ್ರೀಕಾಂತ್ ಶಿಂಧೆ ಹೇಳಿದರು.