ಮುಂಬೈ: ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದದ ‘ಭಾರತ ರತ್ನ’ವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಹಾರಾಷ್ಟ್ರ ಸರ್ಕಾರ ಸಂಪುಟ ಗುರುವಾರ ಅಂಗೀಕರಿಸಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ, ಕಳೆದ ರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದ ಉದ್ಯಮ ರಂಗದ ದಿಗ್ಗಜ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯವನ್ನು ಅಂಗೀಕರಿಸಲಾಯಿತು ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕೈಗಾರಿಕೋದ್ಯಮಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನೂ ಸಂಪುಟ ಅಂಗೀಕರಿಸಿತು. ಟಾಟಾ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣ ಪ್ರಶಸ್ತಿಯನ್ನು ಅವರು ಬದುಕಿದ್ದಾಗ ನೀಡಲಾಗಿತ್ತು.
ಸಮಾಜದ ಬೆಳವಣಿಗೆಗೆ ಉದ್ಯಮಶೀಲತೆ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಸಂಪುಟ ನಿರ್ಣಯವು ಹೇಳಿದೆ. ಹೊಸ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ದೇಶವನ್ನು ಪ್ರಗತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಬಹುದು. ಇದಕ್ಕೆ ದೇಶ ಪ್ರೇಮ ಮತ್ತು ಸಮಾಜದ ಉನ್ನತಿಗೆ ಪ್ರಾಮಾಣಿಕ ಭಾವನೆಗಳು ಬೇಕು. ಅದನ್ನು ರತನ್ ಟಾಟಾ ತೋರಿಸಿಕೊಟ್ಟಿದ್ದಾರೆ. ದೇಶ ಮತ್ತು ಸಮಾಜಕ್ಕೆ ಬದ್ಧರಾಗಿರುವ ದೂರದೃಷ್ಟಿಯ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಕೈಗಾರಿಕಾ ಕ್ಷೇತ್ರ ಮತ್ತು ಸಮಾಜದ ಉನ್ನತಿಯಲ್ಲಿ ಟಾಟಾ ಅವರ ಪಾತ್ರ ಅಪ್ರತಿಮವಾಗಿದೆ. ಅವರು ಎಲ್ಲಾ ಸವಾಲುಗಳನ್ನು ಎದುರಿಸಿದರು. ಉನ್ನತ ನೈತಿಕತೆ, ಶಿಸ್ತಿನಿಂದ ಪಾರದರ್ಶಕ ಮತ್ತು ಸ್ವಚ್ಛ ವ್ಯಾಪಾರ ಆಡಳಿತಕ್ಕೆ ಬದ್ಧವಾಗಿದ್ದರು ಎಂದು ಸಂಪುಟ ನಿರ್ಣಯ ಹೇಳಿದೆ.