ಮುಂಬೈ: ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೆ, ಮನೆಗೆ ಹೋಗಿ ಅಡುಗೆ ಮಾಡಿ ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ)ಯ ಸಂಸದೆ ಸುಪ್ರಿಯಾ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ನಾಯಕ ಚಂದ್ರಕಾಂತ್ ಪಾಟೀಲ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಮಹಿಳಾ ವಲಯದ ಆಕ್ರೋಶಕ್ಕೂ ಕಾರಣವಾಗಿದೆ.
ಸುಪ್ರಿಯಾ ಅವರು ಪಕ್ಷದ ಸಭೆಯಲ್ಲಿ ಒಬಿಸಿ ಮೀಸಲಾತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೇಳಿದ ಪ್ರಶ್ನೆಗೆ ರೊಚ್ಚಿಗೆದ್ದ ಚಂದ್ರಕಾಂತ್ ಪಾಟೀಲ್, ನೀವೇಕೆ ರಾಜಕೀಯದಲ್ಲಿದ್ದೀರಿ? ಮನೆಗೆ ಹೋಗಿ ಅಡುಗೆ ಮಾಡಿ. ನೀವು ರಾಜಕೀಯದಲ್ಲಿದ್ದು ಸಿಎಂ ಭೇಟಿ ಮಾಡುವುದು ಹೇಗೆಂದು ಅರ್ಥವಾಗುತ್ತಿಲ್ಲವೇ? ನೀವು ದೆಹಲಿಗಾದರೂ ಹೋಗಿ ಅಥವಾ ನರಕಕ್ಕಾದರೂ ಹೋಗಿ ಅಥವಾ ಎಲ್ಲಿಗಾದರೂ ಹೋಗಿ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯವರು ಸ್ತ್ರೀದ್ವೇಷಿಗಳು ಮತ್ತು ಸಾಧ್ಯವಾದಾಗಲೆಲ್ಲಾ ಮಹಿಳೆಯರನ್ನು ಕೀಳಾಗಿ ಕಾಣುತ್ತಾರೆ ಎಂದು ನಾನು ಹಿಂದೆಯೇ ಹೇಳಿದ್ದೆ. ಗೃಹಿಣಿ, ತಾಯಿ ಮತ್ತು ಯಶಸ್ವಿ ರಾಜಕಾರಣಿಯಾಗಿರುವ ನನ್ನ ಹೆಂಡತಿಯ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ನನ್ನ ಪತ್ನಿಗೆ ಮಾಡಿದ ಅವಮಾನ ಎಲ್ಲ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಪ್ರಸ್ತುತ ರಾಜಕೀಯದಿಂದ ದೂರ ಉಳಿದಿರುವ ಸುಪ್ರಿಯಾ ಪತಿ, ಚಂದ್ರಕಾಂತ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.