ಮದರಸಾ ಪರೀಕ್ಷೆ – ಎಸ್ ಎಸ್ಎಲ್ ಸಿ ಪರೀಕ್ಷೆ ಏಕಕಾಲದಲ್ಲಿ ನಡೆಯದಂತೆ ವೇಳಾಪಟ್ಟಿ ಸಿದ್ಧಪಡಿಸಲು ಡಿಸಿ ಸೂಚನೆ

Prasthutha|

ಮಂಗಳೂರು: ಕೋವಿಡ್ ಲಸಿಕೆಯ ಉಪಯುಕ್ತತೆಯ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವಿದ್ದು ಈ ಬಗ್ಗೆ ಪ್ರಚಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆಂಜನಪ್ಪ ಅವರಿಗೆ ಸೂಚಿಸಿದರು.

- Advertisement -


ಅವರು ಡಿ.29ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರದಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮದರಸಾ ಶಿಕ್ಷಣ ಕ್ರಮ ಮತ್ತು ಮದರಸಾಗಳಲ್ಲಿನ ವಾರ್ಷಿಕ ಪರೀಕ್ಷೆಗಳು ಹಾಗೂ ಎಸ್ ಎಸ್ಎಲ್ಸಿ ಪರೀಕ್ಷೆಗಳು ಏಕಕಾಲದಲ್ಲಿ ನಡೆಯದಂತೆ ವೇಳಾಪಟ್ಟಿ ಸಿದ್ಧಪಡಿಸಬೇಕು ಹಾಗೂ ಮದರಸಾ ಆಧುನೀಕರಣ ಯೋಜನೆಯ ಪ್ರಯೋಜನ ಪಡೆಯುವಂತೆ ಅವರು ತಿಳಿಸಿದರು.

- Advertisement -


ಅಲ್ಪಸಂಖ್ಯಾತ ಸಮುದಾಯದ ಯುವಕ ಹಾಗೂ ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯ ಲಾಭ ಪಡೆಯಲು ವ್ಯಾಪಕವಾಗಿ ಪ್ರಚಾರ ಮಾಡಬೇಕು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಜಾರಿಯಲ್ಲಿರುವ ಶೈಕ್ಷಣಿಕ ಹಾಗೂ ಇತರೆ ಸಾಲ ಸೌಲಭ್ಯಗಳ ಪ್ರಯೋಜನಾ ಪಡೆಯುವಂತೆ ಹಾಗೂ ಈಗಾಗಲೇ ಸಾಲ ಪಡೆದಿರುವವರು ನಿಗದಿತ ಅವಧಿಯೊಳಗೆ ಮರುಪಾವತಿಸುವಂತೆ ತಿಳಿಸಬೇಕು ಎಂದರು.


ವಿದೇಶಗಳಲ್ಲಿ ವೃತ್ತಿ ನಿರ್ವಹಿಸುತ್ತಿರುವ ಭಾರತೀಯರಿಗೆ ಮತದಾರರ ಗುರುತಿನ ಚೀಟಿಗೆ ಫಾರಂ-6ಎ ಮುಖಾಂತರ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp