►‘ಕೋವಿಡ್ ಎರಡನೇ ಅಲೆಗೆ ನೀವೇ ಕಾರಣ, ನೀವೇನು ಅನ್ಯಗ್ರಹದಲ್ಲಿದ್ದೀರೇ?’
ಚೆನ್ನೈ : ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕೋವಿಡ್ ಸಾಂಕ್ರಾಮಿಕದ ನಡುವೆಯೂ ರಾಜಕೀಯ ರಾಲಿಗಳಿಗೆ ಅನುಮತಿ ನೀಡಿದ್ದ ನಿಮ್ಮ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ಹೊರಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಕೋವಿಡ್ ಎರಡನೇ ಅಲೆಗೆ ನಿಮ್ಮ ಸಂಸ್ಥೆಯೇ ಪ್ರಮುಖ ಕಾರಣ. ಹೀಗಿರುವಾಗ ನಿಮ್ಮವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮೌಖಿಕವಾಗಿ ಚುನಾವಣಾ ಆಯೋಗದ ವಕೀಲರಿಗೆ ಹೇಳಿದರು.
ನ್ಯಾಯಾಲಯಗಳ ಆದೇಶಗಳ ಹೊರತಾಗಿಯೂ ಕೋವಿಡ್ ಮಾರ್ಗಸೂಚಿ ನಿಯಮಗಳನ್ನು ಪಾಲಿಸುವಲ್ಲಿ ಚುನಾವಣಾ ಆಯೋಗ ಸಂಪೂರ್ಣವಾಗಿ ವಿಫಲಗೊಂಡಿದೆ. ಚುನಾವಣಾ ರಾಲಿಗಳು ನಡೆದಾಗ ನೀವು ಬೇರೊಂದು ಗ್ರಹದಲ್ಲಿದ್ದೀರೇ? ಎಂದು ನ್ಯಾಯಧೀಶರು ಆಯೋಗದ ವಕೀಲರನ್ನು ಪ್ರಶ್ನಿಸಿದರು. ಮತ ಎಣಿಕೆ ದಿನದಂದು ಕೋವಿಡ್ ನಿಯಮಗಳ ಪಾಲನೆ ಕುರಿತಾದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸದೆ ಇದ್ದಲ್ಲಿ ಮತ ಎಣಿಕೆಗೆ ತಡೆ ಹೇರುವ ಎಚ್ಚರಿಕೆಯನ್ನೂ ನ್ಯಾಯಾಲಯ ನೀಡಿದೆ.
ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾದುದನ್ನು ನಿಮ್ಮಂತಹಾ ಸಾಂವಿಧಾನಿಕ ಪ್ರಾಧಿಕಾರಗಳಿಗೆ ನೆನಪಿಸಬೇಕಾಗಿರುವುದು ಕಳವಳಕಾರಿ. ಜನರು ಬದುಕಿದರೆ ಮಾತ್ರ ಅವರ ಹಕ್ಕುಗಳನ್ನು ಅನುಭವಿಸಲು ಸಾಧ್ಯ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಮತ ಎಣಿಕೆ ದಿನದ ಮಾರ್ಗಸೂಚಿಯನ್ನು ಎಪ್ರಿಲ್ 30ರ ಒಳಗಾಗಿ ಎಲ್ಲಾ ಸಂಬಂಧಿತ ಪ್ರಾಧಿಕಾರಗಳೊಂದಿಗೆ ಚರ್ಚೆ ನಡೆಸಿ ನ್ಯಾಯಾಯಲಯದ ಮುಂದಿಡಬೇಕೆಂದು ಆದೇಶಿಸಿತು. ಈ ಕುರಿತ ಮುಂದಿನ ವಿಚಾರಣೆ ಎಪ್ರಿಲ್ 20 ಕ್ಕೆ ನಿಗದಿಪಡಿಸಿತು.