ಮಡಿಕೇರಿ: ಕಂಪನಿಯೊಂದಕ್ಕೆ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿದ ಬಳಿಕ ಕಂಪನಿ ಅಕ್ರಮ ಎಂದು ಘೋಷಿಸಲ್ಪಟ್ಟ ಪರಿಣಾಮ ಸೈನಿಕನ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ.
ಸೋಮವಾರಪೇಟೆ ತಾಲ್ಲೂಕಿನ ಯಡೂರಿನ ಲಿಂಗರಾಜು ಎಂಬುವರ ಪತ್ನಿ ಪಾರ್ವತಿ ಪಿಎಸಿಎಲ್ ಕಂಪನಿಯಲ್ಲಿ 2010 ರಿಂದ ಏಜೆಂಟರಾಗಿದ್ದು, ಗ್ರಾಮದ 17 ಜನರಿಂದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿಸಿದ್ದರು. ಆದರೆ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಆರ್ ಬಿಐ ರೂಪಿಸಿರುವ ನಿಯಮಗಳನ್ನು ಕಂಪನಿ ಪಾಲಿಸಿಲ್ಲ ಎಂದು ಸೆಬಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು. ಬಳಿಕ 2017 ರಲ್ಲಿ ಕಂಪೆನಿಯ ಎಲ್ಲಾ ಆಸ್ತಿಯನ್ನು ಇ. ಡಿ. ಮುಟ್ಟುಗೋಲು ಹಾಕಿಕೊಂಡಿತ್ತು.
ಇದರಿಂದಾಗಿ ಪಾರ್ವತಿ ಅವರ ಮೂಲಕ ಹೂಡಿಕೆ ಮಾಡಿದ್ದ ಹಣವನ್ನು ವಾಪಸ್ ಕೊಡಿಸಿ ಎಂದು ಜನರು ಯಡೂರು ಗ್ರಾಮಾಭಿವೃದ್ಧಿ ಸಮಿತಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಗ್ರಾಮ ಸಮಿತಿ ಇದೀಗ ಪಾರ್ವತಿ ಮತ್ತು ಲಿಂಗರಾಜ್ ಅವರ ಕುಟುಂಬಕ್ಕೆ 2022 ರ ಮಾರ್ಚ್ 15 ರಿಂದ ಬಹಿಷ್ಕಾರ ಹಾಕಿದೆ.
ಏಪ್ರಿಲ್ ತಿಂಗಳಲ್ಲಿ ನಡೆಯುವ ಊರಿನ ಸುಗ್ಗಿ ಹಬ್ಬಕ್ಕೆ ಪಂಜಾಬ್ ನಲ್ಲಿ ಸೇನೆಯಲ್ಲಿ ಲ್ಯಾನ್ಸ್ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಲಿಂಗರಾಜು ಪಾರ್ವತಿ ದಂಪತಿ ಪುತ್ರ ಸಂಜಯ್ ಎರಡು ತಿಂಗಳ ರಜೆ ತೆಗೆದು ತಮ್ಮ ಊರು ಯಡೂರಿಗೆ ಬಂದಿದ್ದರು. ಆದರೆ ಹಣದ ವಿಷಯಕ್ಕೆ ತಮ್ಮ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಿದ ವಿಷಯ ತಿಳಿದು ಹವಾಲ್ದಾರ್ ಸಂಜಯ್ ತೀವ್ರ ನೊಂದುಕೊಂಡಿದ್ದರು.
ಏನಾದರೂ ಆಗಲಿ, ಬಹಿಷ್ಕಾರ ಹಾಕಿರುವುದು ನಮ್ಮ ಕುಟುಂಬದವರ ಮೇಲೆ ಅಲ್ವಾ,? ದೇಶ ಕಾಯುವ ನನ್ನ ಮೇಲೆ ಆ ರೀತಿ ಮಾಡುವುದಿಲ್ಲ ಎಂದು ಭಾವಿಸಿ ಸುಗ್ಗಿ ಜಾತ್ರೆಯಲ್ಲಿ ಭಾಗವಹಿಸುವುದಕ್ಕೆ ಬಂದಿದ್ದರು. ಆದರೆ ಅಲ್ಲಿ ಯಾರು ಮಾತನಾಡಿಸದೆ ಹವಾಲ್ದಾರ್ ಸಂಜಯ್ ನನ್ನು ದೂರ ಮಾಡಿದ್ದರು. ಇದರಿಂದ ತೀವ್ರ ಬೇಸರಗೊಂಡ ಸಂಜಯ್ ಒಬ್ಬಂಟಿಗರಂತೆ ಊರಿನಲ್ಲಿ ರಜಾ ದಿನಗಳನ್ನು ಕಳೆದು ಕಳೆದ 15 ದಿನಗಳ ಹಿಂದೆಯಷ್ಟೇ ಸೇವೆಗೆ ವಾಪಸ್ ಆಗಿರುವುದು ಬೆಳಕಿಗೆ ಬಂದಿದೆ.
ಇದರಿಂದ ಊರಿನಲ್ಲಿ ಮೂರು ಕುಟುಂಬಗಳ ಮನೆಗೆ ಯಾರು ಹೋಗುತ್ತಿಲ್ಲ. ಆ ಮೂರು ಮನೆಗಳ ಯಾರನ್ನೂ ತಮ್ಮ ಮನೆಗೆ ಸೇರಿಸುತ್ತಿಲ್ಲ. ಇದರಿಂದ ಮೂರು ಕುಟುಂಬಗಳು ಮಾನಸಿಕವಾಗಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ನಾವು ಹಣ ಕಟ್ಟಿಸುತ್ತಿದ್ದ ಕಂಪೆನಿಯ ವಿರುದ್ಧ ಕೇಸ್ ಸುಪ್ರಿಂಕೋರ್ಟಿನಲ್ಲಿ ನಡೆಯುತ್ತಿದೆ. ಕೇಸ್ ಮುಗಿಯದೇ ಹಣ ನೀವೇ ಕೊಡಿ ಎಂದು ಮುಖ್ಯವಾಗಿ ನಾಲ್ಕೈದು ಜನರು ಒತ್ತಾಯ ಮಾಡಿ ನಮ್ಮ ಮೇಲೆ ಬಹಿಷ್ಕಾರ ಹೇರಿಸಿದ್ದಾರೆ ಎಂದು ಹವಾಲ್ದಾರ್ ಸಂಜಯ್ ಅವರ ತಂದೆ ಲಿಂಗರಾಜು ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದು ಕಡೆ ಲಿಂಗರಾಜು ಅವರ ಮನೆ ಕೆಲಸಕ್ಕೆ ಹೋಗುತ್ತಿದ್ದೀರಾ ಎಂದು ಕೂಲಿ ಮಾಡುವ ನಮಗೂ ಊರಿನಲ್ಲಿ ಬಹಿಷ್ಕಾರ ಹಾಕಲಾಗಿದೆ ಎಂದು ರಾಮಣ್ಣ ಅಳಲು ತೋಡಿಕೊಂಡಿದ್ದಾರೆ.
ಆದರೆ ಅಲ್ಲಿ ತಾನು ದೇಶಕ್ಕಾಗಿ ಏನು ಸೇವೆ ಮಾಡಿದರೆ ಏನು ಬಂತು, ನನ್ನ ಕುಟುಂಬಕ್ಕೆ ಭದ್ರತೆ ಇಲ್ಲ ಎನ್ನುವ ನೋವು ತೀವ್ರವಾಗಿ ಕಾಡಿ, ಇದೇ ಚಿಂತನೆಯಲ್ಲಿ ಖಿನ್ನತೆಗೆ ಒಳಗಾಗುವ ಸ್ಥಿತಿ ತಲುಪಿದ್ದರು. ಇದನ್ನು ಗಮನಿಸಿದ್ದ ಸೇನಾಧಿಕಾರಿಗಳು ಹವಾಲ್ದಾರ್ ಸಂಜಯ್ ನನ್ನು ವಿಚಾರಿಸಿ, ಕೌನ್ಸಿಲಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.