ಮಡಿಕೇರಿ: ಬೆಳ್ಳಿ ಪದಕ ಪಡೆದ ‘ಹಾಕಿ’ ಕ್ರೀಡಾಪಟುಗಳಿಗೆ ಸನ್ಮಾನ

Prasthutha|

ಕೊಡಗು: ಸತತ ಪ್ರಯತ್ನ, ನಿರ್ದಿಷ್ಟ ಗುರಿ, ಕಠಿಣ ಶ್ರಮ ಇದ್ದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಹಾಕಿ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರು ಹೇಳಿದರು. 

- Advertisement -

ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಇತ್ತೀಚೆಗೆ ನಡೆದ ಭಾರತೀಯ 12 ನೇ ಹಾಕಿ ಹಿರಿಯ ಬಾಲಕಿಯರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 33 ವರ್ಷಗಳ ನಂತರ ಬೆಳ್ಳಿ ಪದಕ ಪಡೆದಿರುವ ಕ್ರೀಡಾಪಟುಗಳಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಾಲು, ಹಾರ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಪಡೆದ ಕ್ರೀಡಾಪಟುಗಳ ಶ್ರಮವನ್ನು  ಶ್ಲಾಘಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಮುಂದಿನ ದಿನಗಳಲ್ಲಿ ಕಠಿಣ ಶ್ರಮ, ಸತತ ಪ್ರಯತ್ನದಿಂದ ಇನ್ನೂ ಮಹತ್ತರ ಸಾಧನೆ ಮಾಡಬೇಕು. ಇತರರಿಗೆ ಆದರ್ಶವಾಗಿದ್ದು, ಅದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳು ದೊರೆಯುವಾಗ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕ್ರೀಡೆಯಲ್ಲಿ ದೈಹಿಕ ಸಾಮರ್ಥ್ಯವೂ ಬಹಳ ಮುಖ್ಯ ಪಾತ್ರ ವಹಿಸಿದೆ. ಆ ನಿಟ್ಟಿನಲ್ಲಿ ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯದ ಕಡೆ ಗಮನ ಹರಿಸಬೇಕು ಎಂದು ಹೇಳಿದರು.

- Advertisement -

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಾತನಾಡಿ, ಹಾಕಿ ಕ್ರೀಡೆಯಲ್ಲಿ ವೈಯಕ್ತಿಕ ಪರಿಶ್ರಮದ ಜೊತೆಗೆ ತಂಡದ ಪರಿಶ್ರಮವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಒಂದು ತಂಡದ ಯಶಸ್ಸಿನ ಹಿಂದೆ ಗುರುಹಿರಿಯರ ಸಲಹೆ ಮಾರ್ಗದರ್ಶನ ಮುಖ್ಯವಾಗಿದೆ. ಬಡತನದಿಂದ ಬಂದು ಇಷ್ಟೆಲ್ಲಾ ಸಾಧನೆ ಮಾಡಿರುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವಂತಾಗಬೇಕು, ಆ ನಿಟ್ಟಿನಲ್ಲಿ ಆತ್ಮವಿಶ್ವಾಸ, ಕಠಿಣ ಶ್ರಮ, ಗುರಿ ಇಟ್ಟುಕೊಂಡು ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ಒಲಂಪಿಕ್ಸ್ ಹಾಗೂ ಹಾಕಿ ಚಾಂಪಿಯನ್‍ಶಿಪ್ ಪಂದ್ಯಾಟಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದು ದೇಶಕ್ಕೆ ಮತ್ತು ತಂದೆ-ತಾಯಂದಿರಿಗೆ ಗೌರವ ತರುವಂತಾಗಬೇಕು ಎಂದು ಹೇಳಿದರು.

ಕಷ್ಟ ಎಂದುಕೊಂಡರೆ ಯಾವುದೂ ಕೂಡ ಸಾಧಿಸಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಸಾಧಿಸುವ ಗುರಿ ಮತ್ತು ಛಲ ರೂಢಿಸಿಕೊಳ್ಳಬೇಕು. ನೀವು ಪಡೆದ ಬೆಳ್ಳಿ ಪದಕ ಮುಂದಿನ ದಿನಗಳಲ್ಲಿ ಚಿನ್ನದ ಪದಕವಾಗಿ ಬದಲಾಗಬೇಕು. ಅದನ್ನು ಪರಿವರ್ತಿಸುವ ಗುರಿ, ಸಾಮಥ್ರ್ಯ, ಪರಿಶ್ರಮ ಕ್ರೀಡಾಪಟುಗಳಿಗೆ ಇರಬೇಕು ಎಂದು ಪ್ರೋತ್ಸಾಹಿಸಿದರು.

ಐತಿಹಾಸಿಕ ಗೆಲುವನ್ನು ಸಾಧಿಸಿದ ಕ್ರೀಡಾಪಟುಗಳಿಗೆ ಹಾರೈಸಿದ ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಹಾಕಿ ಕ್ರೀಡೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವಂತಾಗಲಿ ಎಂದು ಹೇಳಿದರು.

ಮಾಜಿ ಸೈನಿಕರಾದ ಜಯಚಿನ್ನಪ್ಪ ಅವರು ಮಾತನಾಡಿ ಕ್ರೀಡೆಯಲ್ಲಿ ಆತ್ಮವಿಶ್ವಾಸ, ಪರಿಶ್ರಮ ಸಾಧಿಸುವ ಗುರಿ ಬಹಳ ಮುಖ್ಯ.  ಸಮರ್ಪಣೆ, ನಿರ್ಣಯ, ಭಕ್ತಿ ಈ ಮೂರು ಅಂಶಗಳನ್ನು ಹೊಂದಿದರೆ ಮಾತ್ರ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ.ಕ್ರೀಡೆಯಲ್ಲಿ ಒಂದು ಗುಂಪಾಗಿ ಸ್ಪೂರ್ತಿಯಿಂದ ಆಡಿದಾಗ ಮಾತ್ರ ಯಶಸ್ಸು ಸಾಧಿಸಬಹುದು. ಕ್ರೀಡಾಪಟುಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾದಾಗ ಕ್ರೀಡೆಯಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಅವರು ಮಾತನಾಡಿ ಓದಿನ ಜೊತೆ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಲ್ಲಿ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ಶ್ರದ್ದೆ, ಪರಿಶ್ರಮದಿಂದ ಮುನ್ನಡೆಯಬೇಕು ಎಂದರು.

ತಂಡದ ವ್ಯವಸ್ಥಾಪಕರಾದ ರಾಕಿ ಪೂವಣ್ಣ ಅವರು ಮಾತನಾಡಿ ಗುರಿ ಸಾಧಿಸುವ ನಿಟ್ಟಿನಲ್ಲಿ ಪರಿಶ್ರಮದಿಂದ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚೆಯ್ಯಂಡ ಸತ್ಯ, ಕೂಡಿಗೆ ಕ್ರೀಡಾ ಶಾಲೆಯ ಆಡಳಿತಾಧಿಕಾರಿ ಜಯರಾಮ, ಹಾಕಿ ತರಬೇತುದಾರರಾದ ಕೆ.ಕೆ.ಬಿಂದಿಯಾ, ಸುಬ್ಬಯ್ಯ, ಜಿ.ಸುರೇಶ, ಕೊಡವ ಹಾಕಿ ಅಕಾಡೆಮಿ ಸದಸ್ಯರು ಇತರರು ಇದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಎಸ್.ಗುರುಸ್ವಾಮಿ ಸ್ವಾಗತಿಸಿದರು, ಕೂಡಿಗೆ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಟಿ.ದೇವಕುಮಾರ ನಿರೂಪಿಸಿದರು, ಶಿಕ್ಷಕರಾದ ಎಂ.ಡಿ.ಮುರಳಿ ಅವರು ವಂದಿಸಿದರು.



Join Whatsapp