ಮಡಿಕೇರಿ: ಆನೆಕಾಲು ರೋಗ ಸಮೀಕ್ಷೆ ಅಭಿಯಾನ

Prasthutha|

ಮಡಿಕೇರಿ: ತಾಲೂಕಿನಲ್ಲಿ ಆರೋಗ್ಯ ಇಲಾಖೆಯಿಂದ ಆನೆಕಾಲು ರೋಗ ಪತ್ತೆಗಾಗಿ ಕಳೆದ ವಾರದಿಂದ ಸಮೀಕ್ಷಾ ಕಾರ್ಯ ತೀವ್ರವಾಗಿ ನಡೆಯುತ್ತಿದೆ.

- Advertisement -

ಆನೆಕಾಲು ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯಾದ್ಯಂತ ನಡೆಯುತ್ತಿರುವ ಈ ಸಮೀಕ್ಷೆ ತಾಲ್ಲೂಕಿನ ಪ್ರಾಥಮಿಕ  ಆರೋಗ್ಯ ಕೇಂದ್ರ ಮೂರ್ನಾಡು, ಮಡಿಕೇರಿ ನಗರ ಆರೋಗ್ಯ ಕೇಂದ್ರ, ಸಂಪಾಜೆ ಮತ್ತು ಸಂಪಾಜೆ ವ್ಯಾಪ್ತಿಯ ಪೆರಾಜೆ ಸೇರಿದಂತೆ ೪ ಪ್ರದೇಶಗಳಲ್ಲಿ ಆನೆಕಾಲು ರೋಗದ ಪತ್ತೆಗಾಗಿ ರಾತ್ರಿ ರಕ್ತಲೇಪನ  ಸಂಗ್ರಹ  ಮಾಡಿ  ಆನೆಕಾಲು  ರೋಗದ ಸರ್ವೇಕ್ಷಣಾ ಕಾರ್ಯ ಒಂದು ವಾರದಿಂದ ರಾತ್ರಿ ವೇಳೆ ನಡೆಯುತ್ತಿದೆ.

ಆನೆಕಾಲು ರೋಗ ಒಂದು ಪರಾವಲಂಬಿ ಸೂಕ್ಷ್ಮಾಣು ಜೀವಿಯಿಂದ ಉಂಟಾಗುವ ಖಾಯಿಲೆ. ಇದು ಸೋಂಕು ಹೊಂದಿದ ಕ್ಯೂಲೆಕ್ಸ್ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲಿ ಕಚ್ಚುತ್ತವೆ. ಇದರಿಂದ ಸಾಮಾನ್ಯ ಜ್ವರ, ಮೈಕೈನೋವು ಕಾಣಿಸಿಕೊಂಡು ಯಾವುದೇ ಲಕ್ಷಣಗಳಿಲ್ಲದೆ ಆರಂಭಿಕ ಹಂತದಲ್ಲಿ ಕಂಡು ಹಿಡಿಯದಿದ್ದರೆ 8 ರಿಂದ 10 ವರ್ಷ ಕಳೆದ ಮೇಲೆ ಮನುಷ್ಯರ ಕಾಲು ಆನೆಯ ಕಾಲಿನಂತೆ ಆಗುವುದು, ಚರ್ಮ ದಪ್ಪವಾಗುವುದು ಸೇರಿದಂತೆ ಆರೋಗ್ಯ ಸಮಸ್ಯೆಗಳಿಂದ ನಡೆಯಲು ಕಷ್ಟವಾಗುವುದು ಮತ್ತು ಇತರೆ ಕಾಯಿಲೆಗಳಿಗೆ ಕಾರಣವಾಗುವುದು.

- Advertisement -

ಈ ಪರಾವಲಂಬಿ ಜೀವಿ ಹಗಲಿನಲ್ಲಿ ವ್ಯಕ್ತಿಯ ದೇಹದೊಳಗೆ ಅಡಗಿ ಕುಳಿತಿರುತ್ತದೆ. ರಾತ್ರಿಯ ನಂತರ ಚರ್ಮದಡಿಯ ರಕ್ತದಲ್ಲಿ ತೇಲಲು ಆರಂಭಿಸುತ್ತದೆ. ರಾತ್ರಿ ವೇಳೆ ಸೊಳ್ಳೆ ಸೋಂಕಿತ ವ್ಯಕ್ತಿಯನ್ನು ಕಚ್ಚಿದಾಗ ರಕ್ತದಲ್ಲಿರುವ ಪರಾವಲಂಬಿಯನ್ನು ಸೊಳ್ಳೆ ಪಡೆದು ಮತ್ತೊಬ್ಬನಿಗೆ ಕಚ್ಚಿ ಹರಡಲು ಆರಂಭಿಸುತ್ತದೆ.

 ಈ ಕುರಿತು ಜಿಲ್ಲಾ ಸರ್ವೇಕ್ಷಣಾ ಘಟಕದ ಎಂಟೂಮಾಲಜಿಸ್ಟ್ ಮಂಜುನಾಥ್ ಅವರು ಮಾಹಿತಿ ನೀಡಿ ಕೊಡಗು ಜಿಲ್ಲೆಯಲ್ಲಿ ಆನೆಕಾಲು ರೋಗ ಪ್ರಕರಣಗಳು ಎಲ್ಲಾ ವಲಸೆಗಾರರಿಂದ ಬರುವ ಭೀತಿಯಿದ್ದು ಆರಂಭಿಕ ಹಂತದಲ್ಲಿ ತಡೆಯಲು ರಾತ್ರಿ ಸಮಯದಲ್ಲಿ ರಕ್ತ ಲೇಪನ ತೆಗೆದು ಪತ್ತೆ ಮಾಡುವ ಈ ಕಾರ್ಯದಲ್ಲಿ  ಸರ್ಕಾರ ಮತ್ತು ಇಲಾಖೆ ಮಾರ್ಗಸೂಚಿಯಂತೆ ಆನೆಕಾಲು ರೋಗ ಮುಕ್ತವನ್ನಾಗಿಸುವ ಈ ಕಾರ್ಯಕ್ಕೆ ಆರೋಗ್ಯ ಇಲಾಖೆಯೊಂದಿಗೆ ಗ್ರಾಮ ಪಂಚಾಯತಿ ಕೈ ಜೋಡಿಸಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ತಾಲ್ಲೂಕು ಅರೋಗ್ಯ ನಿರೀಕ್ಷಣಾ ಅಧಿಕಾರಿ ಜಿ.ವಿ.ಶ್ರೀನಾಥ್, ತಾಲ್ಲೂಕು ನೋಡೆಲ್ ಆರೋಗ್ಯ ನಿರೀಕ್ಷಣಾ ಅಧಿಕಾರಿ ಮುತ್ತು, ಲೋಕೇಶ್, ಮೂರ್ನಾಡು ಗ್ರಾ.ಪಂ.ಅಧ್ಯಕ್ಷರು ಹಾಗೂ ವೈದ್ಯಾಧಿಕಾರಿಗಳಾದ ಡಾ.ವಿಜಯ್ ಕುಮಾರ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಕು.ಶುಕ್ರೂತದೊರೆಸ್ವಾಮಿ ಮತ್ತು ಸಂಪಾಜೆ ಗ್ರಾ.ಪಂ.ಅದ್ಯಕ್ಷರು ಮತ್ತು ಆಡಳಿತ ಅಧಿಕಾರಿ ಮಲ್ಲಿಕಾರ್ಜುನ, ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡು ಸ್ಥಳೀಯ ಗ್ರಾಮ ಪಂಚಾಯತಿಯವರ ಸಹಕಾರ ಪಡೆದು ತಾಲೂಕಿನ ೪ ನಿಗದಿತ ಪ್ರದೇಶಗಳಿಂದ ತಲಾ ೫೦೦ ರಂತೆ ೨ ಸಾವಿರ ಜನರಿಂದ ರಾತ್ರಿ ರಕ್ತ ಲೇಪನ ಸಂಗ್ರಹಿಸಿ ಪ್ರಯೋಗ ಶಾಲೆಗೆ ಪರೀಕ್ಷೆಗಾಗಿ ಕಳಿಸಲಾಗಿದೆ.

ಸ್ಥಳೀಯ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳು, ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ  ಪ್ರಾಥಮಿಕ  ಅರೋಗ್ಯ  ಕೇಂದ್ರಗಳ ಸಿಬ್ಬಂದಿಗಳ ಸಹಯೋಗದೊಂದಿಗೆ ತಂಡಗಳು ರಚಿಸಿಕೊಂಡು ರಕ್ತ ಲೇಪನ ಸಂಗ್ರಹಿಸಿ ಪೈಲೇರಿಯ  ಕುರಿತು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ  ಅರಿವು  ಮೂಡಿಸಲಾಯಿತು.



Join Whatsapp