ಮಧ್ಯಪ್ರದೇಶ: ಒಂದೇ ಸಿರಿಂಜ್ ಬಳಸಿ 39 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ್ದ ವ್ಯಕ್ತಿಯ ಬಂಧನ

Prasthutha|

ಭೋಪಾಲ್: ಖಾಸಗಿ ಶಾಲೆಯೊಂದರಲ್ಲಿ 39 ಮಕ್ಕಳಿಗೆ ಒಂದೇ ಸಿರಿಂಜ್ ಬಳಸಿ ಕೊರೋನವೈರಸ್ ವಿರೋಧಿ ಲಸಿಕೆ ಡೋಸ್ ಅನ್ನು ನೀಡಿರುವ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ ನಡೆದಿದೆ.

- Advertisement -

ಇದಕ್ಕೆ ಸಂಬಂಧಿಸಿ ಲಸಿಕೆ ನೀಡಿದಾತ  ಹಾಗೂ  ಜಿಲ್ಲಾ ಲಸಿಕೆ ಅಧಿಕಾರಿಯನ್ನು ಬಂಧಿಸಿ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ನಗರದ ಜೈನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೆಗಾ ಲಸಿಕೆ ಅಭಿಯಾನದ ವೇಳೆ ಈ ಘಟನೆ ನಡೆದಿದ್ದು, ಜಿತೇಂದ್ರ ಅಹಿರ್ವಾರ್ ಎಂಬವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

ಅಹಿರ್ವಾರ್ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆರೋಗ್ಯ ಇಲಾಖೆಯಿಂದ ಲಸಿಕೆ ಕಾರ್ಯಕ್ರಮವನ್ನು ಕೈಗೊಳ್ಳಲು ತರಬೇತಿ ಪಡೆದಿದ್ದಾನೆ ಎಂದು ಸಾಗರ್  ಜಿಲ್ಲೆಯ ಮುಖ್ಯ ವೈದ್ಯಕೀಯ ಹಾಗೂ  ಆರೋಗ್ಯ ಅಧಿಕಾರಿ ಡಾ. ಡಿ. ಕೆ. ಗೋಸ್ವಾಮಿ ತಿಳಿಸಿದ್ದಾರೆ.

ತನ್ನ ವಿಭಾಗದ ಮುಖ್ಯಸ್ಥರು  ಕಾರಿನಲ್ಲಿ ತನ್ನನ್ನು ಶಾಲೆಗೆ ಕರೆತಂದಿದ್ದಾರೆ. ತನಗೆ ಒದಗಿಸಲಾದ ಒಂದೇ ಸಿರಿಂಜ್ ನೊಂದಿಗೆ ಕೇಂದ್ರದಲ್ಲಿ ಹಾಜರಿದ್ದ ಎಲ್ಲರಿಗೂ ಚುಚ್ಚುಮದ್ದು ನೀಡಲು ಅವರು ತನಗೆ ಹೇಳಿದ್ದರು ‘ನನ್ನದೇನೂ ತಪ್ಪಿಲ್ಲ’ ಎಂದು  ಹೇಳಿರುವ ವೀಡಿಯೋ ವೈರಲ್ ಆಗಿದೆ.

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 39 ಮಕ್ಕಳು 9 ರಿಂದ 12 ನೇ ತರಗತಿಯವರು ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬುಧವಾರ ಕೆಲವು ವಿದ್ಯಾರ್ಥಿಗಳ ಪೋಷಕರು ಮಕ್ಕಳಿಗೆ ಲಸಿಕೆ ಹಾಕಲು ಒಂದೇ ಸಿರಿಂಜ್ ಅನ್ನು ಬಳಸುತ್ತಿರುವುದನ್ನು ಗಮನಿಸಿ ಪ್ರತಿಭಟಿಸಿದ ನಂತರ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಯಿತು ಎನ್ನಲಾಗಿದೆ.



Join Whatsapp