ಕೊಲ್ಕತ್ತಾ : ಕಳೆದ ವಿದಾನಸಭಾ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡ ದೀಪೇಂದು ಬಿಸ್ವಾಸ್ ಅವರು ಇಂದು (ಸೋಮವಾರ, ಮೇ 31) ಕ್ಷಮೆ ಕೋರಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಬಿಜೆಪಿಗೆ ಸೇರುವ ಮೂಲಕ ತಪ್ಪು ಮಾಡಿದ್ದೇನೆ. ಪಕ್ಷಕ್ಕೆ ಮರಳಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್ ಗೆ ಮತ್ತೆ ಮರಳಲು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ದೀಪೇಂದು ಬಿಸ್ವಾಸ್ ಅವರು ಯೋಜಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಇಡೀ ಭಾರತವೇ ಕಾದು ನೋಡುತ್ತಿದ್ದ ಪಶ್ಚಿಮ ಬಂಗಾಳದ ಚುನಾವಣೆ ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ತೃಣಮೂಲ ಕಾಂಗ್ರೆಸ್ ನಿಂದ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡು ಪಶ್ಚಿಮ ಬಂಗಾಳದ ರಾಜ್ಯ ರಾಜಕಾರಣದಲ್ಲಿ ಬಹಳ ದೊಡ್ಡ ಸಂಚಲನವನ್ನುಂಟು ಮಾಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತಾದರೂ, ಆ ಎಲ್ಲಾ ನಿರೀಕ್ಷೆಗಳು ಫಲಿತಾಂಶ ಬಂದ ಮೇಲೆ ಹುಸಿಯಾಗಿದ್ದವು.
ದೀಪೇಂದು ಬಿಸ್ವಾಸ್ ಉತ್ತರ 24 ಪರಗಣ ಬಸಿರ್ಹತ್ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾರೆ. ಮಾರ್ಚ್ ಆರಂಭದಲ್ಲಿ, ಮಮತಾ ಬ್ಯಾನರ್ಜಿ, ಅವರಿಗೆ ಚುನಾವಣಾ ಟಿಕೆಟ್ ನೀಡದ ಕಾರಣ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಸುಮಾರು ಹದಿನೈದು ಮಂದಿ ಚುನಾವಣೆಯ ಸಂದರ್ಭದಲ್ಲಿ ತೃಣಮೂಲ ಕಾಂಗ್ರಸ್ ನ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು, ಈಗ ಬಿಜೆಪಿಯಿಂದ ಮತ್ತೆ ತೃಣಮೂಲಕ್ಕೆ ಸೇರ್ಪಡೆಗೊಳ್ಳುವ ಯೋಚನೆಯಲ್ಲಿ ಟಿಎಂಸಿಯ ಪ್ರಮುಖ ನಾಯಕರುಗಳೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳುತ್ತಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.