ನವದೆಹಲಿ: ಕಾಂಗ್ರೆಸ್ ತೊರೆದು ಎಎಪಿ ಸೇರಿದ್ದ ದೆಹಲಿ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ಅಲಿ ಮೆಹ್ದಿ ಮತ್ತು ಮುಸ್ತಫಾಬಾದ್ ಹಾಗೂ ಬ್ರಿಜ್ ಪುರಿ ವಾರ್ಡ್ ಗಳ ಸದಸ್ಯರಿಬ್ಬರು 24 ಗಂಟೆಗಳೊಳಗೆ ಮತ್ತೆ ಕಾಂಗ್ರೆಸ್’ಗೆ ಮರಳಿದ್ದಾರೆ.
ಈ ಮೂವರೂ ಶುಕ್ರವಾರವಷ್ಟೇ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು. ಆದರೆ ಶನಿವಾರ ಬೆಳಿಗ್ಗೆ ಮತ್ತೆ ಭಾರತದ ಅತಿ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್’ಗೆ ವಾಪಸಾದರು.
ವೀಡಿಯೋ ಬಿಡುಗಡೆ ಮಾಡಿರುವ ಅಲಿ ಮೆಹ್ದಿ, ಎಎಪಿ ಸೇರುವ ಮೂಲಕ ನಾನು ದೊಡ್ಡ ತಪ್ಪು ಮಾಡಿದೆ ಎಂದಿರುವ ಅವರು ಸಾಮಾಜಿಕ ಜಾಲ ತಾಣದಲ್ಲಿ ತನ್ನ ಬಯೋ ವಿವರವನ್ನು ಸಹ ಬದಲಿಸಿದ್ದಾರೆ. ಇಂಡಿಯನ್ ಎಂದು ಇದ್ದುದನ್ನು ವರ್ಕರ್ ಆಫ್ ರಾಹುಲ್ ಗಾಂಧಿ ಎಂದು ಬದಲಿಸಿಕೊಂಡಿದ್ದಾರೆ.
ಈಶಾನ್ಯ ದೆಹಲಿಯ ಮುಸ್ತಫಾಬಾದ್ ಹಾಗೂ ಬ್ರಿಜ್’ಪುರಿ ವಾರ್ಡ್’ಗಳಲ್ಲಿ ಅಲಿ ಎಎಪಿ ಸೇರಿದ್ದರ ವಿರುದ್ಧ ಪ್ರತಿಭಟನೆಗಳು ಆರಂಭವಾಗುತ್ತಲೇ ಅವರು ಕಾಂಗ್ರೆಸ್ಸಿಗೆ ವಾಪಸಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್, ಸಾಮಾಜಿಕ ಜಾಲ ತಾಣ ಮುಖ್ಯಸ್ಥ ಮನು ಜೈನ್ ಮೊದಲಾದವರು ಸಹ ಅಲಿ ಎಎಪಿ ಸೇರಿದ್ದನ್ನು ಟೀಕಿಸಿ “ದಾಟಿ ಹೋದ ಹಾವು” ಎಂದು ಟೀಕಿಸಿದ್ದರು.
ಮುಸ್ತಫಾಬಾದ್ ವಾರ್ಡಿನ ಸದಸ್ಯೆ ಸಬೀಲಾ ಬೇಗಂ ಮತ್ತು ಬ್ರಿಜ್’ಪುರಿ ವಾರ್ಡಿನ ಸದಸ್ಯೆ ನಜಿಯಾ ಖಾತೂನ್ ಅವರು ಸಹ ಅಲಿಯವರ ಜೊತೆಗೆ ಎಎಪಿಗೆ ಹೋಗಿದ್ದರು. ಶುಕ್ರವಾರ ಅವರನ್ನು ಎಎಪಿಯ ದುರ್ಗೇಶ್ ಪಾಠಕ್ ಸ್ವಾಗತಿಸಿದ್ದರು.
“ಅರವಿಂದ ಕೇಜ್ರೀವಾಲ್ ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ನೋಡಿ ನಾವು ಎಎಪಿ ಸೇರಲು ನಿರ್ಧರಿಸಿದೆವು. ನಾವು ನಮ್ಮ ಪ್ರದೇಶಗಳ ಅಭಿವೃದ್ಧಿಯನ್ನು ಬಯಸಿದ್ದೇವೆ” ಎಂದು ಅಲಿಯವರು ಎಎಪಿ ಸೇರುವಾಗ ಹೇಳಿದ್ದರು.
ಆಗ ಅಲಿಯವರು ಜಾಲತಾಣದಲ್ಲಿ ತನ್ನ ಬಯೋ ಬದಲಿಸಿ ಭಾರತೀಯ/ ಶಾಸಕ ಅಭ್ಯರ್ಥಿ ಎಂದು ಬರೆದುಕೊಂಡು, ಹಳದಿ ಕುರ್ತಾದ ಫೋಟೋದೊಡನೆ ಕಾಣಿಸಿಕೊಂಡಿದ್ದರು. ಶನಿವಾರ ವಾಪಸಾದ ಮೇಲೆ ಬಯೋವನ್ನು ‘ವರ್ಕರ್ ಆಫ್ ರಾಹುಲ್ ಗಾಂಧಿ’ ಎಂದು ಬದಲಿಸಿಕೊಂಡಿದ್ದಾರೆ.
“ನಾನು ಯಾವುದೇ ಹುದ್ದೆಯನ್ನು ಬಯಸಿಲ್ಲ. ನಾನು ಕಾಂಗ್ರೆಸ್ಸಿಗೆ ಕೆಲಸ ಮಾಡಲಷ್ಟೆ ಬಯಸಿದ್ದೇನೆ. ನಾನು ದೊಡ್ಡ ತಪ್ಪು ಮಾಡಿದೆ. ಅದಕ್ಕಾಗಿ ಎರಡೂ ಕೈ ಜೋಡಿಸಿ ಕ್ಷಮೆ ಕೇಳುತ್ತಿದ್ದೇನೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿಯವರ ಕ್ಷಮೆಯನ್ನೂ ಕೋರುತ್ತಿದ್ದೇನೆ. ಅಲ್ಲದೆ ನನ್ನ ಪ್ರದೇಶದ ಎಲ್ಲ ನಿವಾಸಿಗಳ ಕ್ಷಮೆ ಕೋರುತ್ತೇನೆ. ನಾನು ರಾಹುಲ್ ಗಾಂಧಿಯವರ, ಪ್ರಿಯಾಂಕಾ ಗಾಂಧಿಯವರ ಪರ ಕೆಲಸ ಮಾಡುವವನು. ನಾನು ಕಾಂಗ್ರೆಸ್ಸಿಗ, ಸದಾ ಕಾಂಗ್ರೆಸ್ ಕಾರ್ಯಕರ್ತನಾಗಿಯೇ ಇರುತ್ತೇನೆ” ಎಂದು ಅಲಿ ಟ್ವೀಟ್ ಮಾಡಿದ್ದಾರೆ.
ಅದೇ ರೀತಿ ನನ್ನ ಜೊತೆಗೆ ಬಂದಿದ್ದ ಇಬ್ಬರು ಕೌನ್ಸಿಲರ್’ಗಳು ಸಹ ಇಲ್ಲಿಯ ಎಲ್ಲರ ಕ್ಷಮೆ ಕೋರಿ ಟ್ವೀಟ್ ಮಾಡುತ್ತಾರೆ ಎಂದೂ ಅಲಿಯವರು ತನ್ನ ವೀಡಿಯೋ ಟ್ವೀಟ್ ನಲ್ಲಿ ಹೇಳಿದ್ದಾರೆ.
ಈ ಬಗೆಗೆ ಎಎಪಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.