ಮಾಡಾಳ್ ಲಂಚ ಪ್ರಕರಣ| ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದ ಸಿದ್ದರಾಮಯ್ಯ

Prasthutha|

ಬೆಂಗಳೂರು: ಶಾಸಕ ಮಾಡಾಳ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಾಜ್ಯ ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಶಾಸಕ ಮಾಡಾಳ್ ಪುತ್ರನ ಬಳಿ ತಕ್ಷಣಕ್ಕೆ 40 ಲಕ್ಷ ರೂಪಾಯಿ, ಮನೆಯಲ್ಲಿ ಸುಮಾರು 8 ಕೋಟಿ ರೂಪಾಯಿ ನಗದು ಜತೆಗೆ ನೂರಾರು ಕೋಟಿ ಅಕ್ರಮ ಆಸ್ತಿಯ ದಾಖಲೆಗಳು ಸಿಕ್ಕರೂ ಈ ಬಗ್ಗೆ ಅರ್ಧ ಗಂಟೆ ಕೂಡ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ ಯಾಕೆ ಅನಿಸಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಸೋಡಿಯ ಬಳಿ 10 ಸಾವಿರ ಸಿಕ್ಕಿದ್ದಕ್ಕೆ CBI ಐದು ದಿನ ಕಸ್ಟಡಿಯಲ್ಲಿ ಇಟ್ಟುಕೊಂಡು ವಿಚಾರಣೆ ನಡೆಸಿತು. ಮಾಡಾಳ್ ವಿರೂಪಾಕ್ಷಪ್ಪರ ಪುತ್ರನನ್ನು ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆಗಾಗಿ ತಮ್ಮ (ಪೊಲೀಸ್) ಕಸ್ಟಡಿಗೆ ಕೇಳದೇ ಸೀದಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಏನಿದು ವಿಚಿತ್ರ? ಎಂದು ಅವರು ಕೇಳಿದ್ದಾರೆ.

- Advertisement -

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಸರ್ಕಾರಿ ವಕೀಲರು ಬಲವಾದ ಆಕ್ಷೇಪಣೆ ಸಲ್ಲಿಸಲಿದ್ದಾರೆ ಎಂದು ನಂಬಬಹುದೇ? ಇಲ್ಲವೇ ಮೌನ ಸಮ್ಮತಿ ಮೂಲಕ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯಕ್ಕೆ ಅವಕಾಶ ಮಾಡಿಕೊಡುವ ಹುನ್ನಾರವನ್ನೇನಾದರೂ ರಾಜ್ಯ ಸರ್ಕಾರ ನಡೆಸುತ್ತಿದೆಯೇ? ಎಂದು ಸಿದ್ದರಾಮಯ್ಯ ಸಂಶಯ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಗನ್ ಮ್ಯಾನ್ ಹೊಂದಿರುವ ಶಾಸಕನ ಸುಳಿವು ಇಲ್ಲಿಯ ವರೆಗೆ ಪೊಲೀಸರಿಗೆ ಸಿಗುತ್ತಿಲ್ಲ ಎಂದು ನಂಬಲು ಸಾಧ್ಯವೇ? ಹೇಗಾದರೂ ಮಾಡಿ ನಿರೀಕ್ಷಣಾ ಜಾಮೀನು ಕೊಡಿಸಿ ಆರೋಪಿ ಶಾಸಕನನ್ನು ಜೈಲು ವಾಸದಿಂದ ಪಾರು ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೊರಟಿದ್ದಾರೆಯೇ? ಒಬ್ಬ ಆರೋಪಿ ಶಾಸಕನನ್ನು ಪತ್ತೆ ಮಾಡಲಾಗದಷ್ಟು ರಾಜ್ಯದ ಪೊಲೀಸರು ನಿಶ್ಯಕ್ತರಾಗಿದ್ದಾರೆಯೇ? ಮೋದಿ – ಅಮಿತ್‌ ಶಾ ಜೋಡಿ ರಾಜ್ಯಕ್ಕೆ ಭೇಟಿ ನೀಡಿದಾಗ ತಮ್ಮ ಪಕ್ಷದ ಶಾಸಕನೇ ಭ್ರಷ್ಟಾಚಾರದ ಆರೋಪದಲ್ಲಿ ಜೈಲಲ್ಲಿದ್ದು ಮುಜುಗರ ಉಂಟುಮಾಡಬಾರದು ಎಂದು ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸುತ್ತಿಲ್ಲವೇ? ಎಂದು ವಿರೋಧ ಪಕ್ಷದ ನಾಯಕ ಪ್ರಶ್ನಿಸಿದ್ದಾರೆ.

Join Whatsapp