ಕೋಲ್ಕತ್ತಾ: ಎಂ.ಎ ಸ್ನಾತಕೋತ್ತರ ಪದವೀಧರೆ ತುಕ್ಟುಕಿ ದಾಸ್ ಎಂಬಾಕೆ ಉದ್ಯೋಗಕ್ಕಾಗಿ ಅಲೆದಾಡಿ ಕೊನೆಗೆ ಅನ್ಯ ಉಪಾಯವಿಲ್ಲದೆ “ ಎಂ.ಎ. ಚಾಯ್ ವಾಲಿ” ಎಂಬ ಹೆಸರಿನಲ್ಲಿ ಕೋಲ್ಕತ್ತಾದ ಹಬ್ರಾ ರೈಲ್ವೇ ಸ್ಟೇಷನ್ ನಲ್ಲಿ ಟೀ ಸ್ಟಾಲ್ ತೆರೆದ ಘಟನೆ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ.
ಕೋಲ್ಕತ್ತಾ ಮೂಲಕದ ತುಕ್ಟುಕಿ ದಾಸ್ ತನ್ನ ಹೆತ್ತವರ ಇಚ್ಛೆಯಂತೆ ಕಷ್ಟಪಟ್ಟು ಓದಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದರು. ಶಿಕ್ಷಕಿಯಾಗಬೇಕೆಂಬ ಮಹದಾಸೆಯೊಂದಿಗೆ ನೌಕರಿಗಾಗಿ ಸಾಕಷ್ಟು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಎಂ.ಎ.ಪದವೀಧರೆಯಾದರೂ ಕೂಡ ವಿದ್ಯೆಗೆ ತಕ್ಕಂತೆ ಉದ್ಯೋಗ ಲಭಿಸದ ಕಾರಣ ಎಂ.ಬಿ.ಎ ಚೈವಾಲ ಎಂಬ ಕಥೆಯನ್ನು ಇಂಟರ್ನೆಟ್ ನಲ್ಲಿ ಓದಿದನ್ನೇ ಸ್ಫೂರ್ತಿಯನ್ನಾಗಿಸಿದ ತುಕ್ಟುಕಿ ದಾಸ್ ಎಂ.ಎ. ಚಾಯ್ ವಾಲಿ ಎಂಬ ಹೆಸರಿನಲ್ಲಿ ಹಬ್ರಾ ರೈಲ್ವೇ ನಿಲ್ದಾಣದಲ್ಲಿ ಟೀ ಸ್ಟಾಲ್ ಅನ್ನು ತೆರೆದು ಸ್ವಾವಲಂಭಿ ಜೀವನ ಸಾಗಿಸಬೇಕೆಂಬ ಕನಸಿನೊಂದಿಗೆ ದಿಟ್ಟ ಹೆಜ್ಜೆಯನ್ನಿಟ್ಟರು.
ವ್ಯಾನ್ ಡ್ರೈವರ್ ಕೆಲಸ ನಿರ್ವಹಿಸುವ ಆಕೆಯ ತಂದೆ ಮತ್ತು ಸಣ್ಣ ಕಿರಾಣಿ ಅಂಗಡಿ ನಡೆಸುವ ತಾಯಿ, ಮಗಳು ತುಕ್ಟುಕಿ ದಾಸ್ ಟೀ ಸ್ಟಾಲ್ ಉದ್ದಿಮೆಯಿಂದ ಆರಂಭದಲ್ಲಿ ಅತೃಪ್ತರಾಗಿದ್ದರು. ಯಾವುದೇ ಕಾಯಕ ಕೀಳುಮಟ್ಟದಲ್ಲ ಎಂದು ಪುತ್ರಿ ಪೋಷಕರಿಗೆ ಮನವರಿಗೆ ಮಾಡಿಕೊಟ್ಟ ಬಳಿಕ ಹೆತ್ತವರು, ಬಂಧುಗಳು ಆಕೆಯ ಕೆಲಸವನ್ನು ಬೆಂಬಲಿಸಿದರು.
ಉನ್ನತ ಶಿಕ್ಷಣ ಪಡೆದು ಚಹಾ ಮಾರಾಟದ ಹಾದಿ ಹಿಡಿಯುವುದು ದೇಶದಲ್ಲಿ ಇದೇ ಮೊದಲಲ್ಲ. ಮಧ್ಯಪ್ರದೇಶದ ಲ್ಯಾಬ್ರವ್ಡಾ ಎಂಬಲ್ಲಿನ ರೈತನ ಮಗ ಪ್ರಫುಲ್ ಬಿಲ್ಲೂರು ಅವರು ಸತತ ಮೂರು ವರ್ಷಗಳ ಕಾಲ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ತಯಾರಿ ನಡೆಸಿದ ಹೊರತಾಗಿಯೂ ಪಾಸ್ ಆಗಲು ಸಾಧ್ಯವಾಗಿರಲಿಲ್ಲ. ಕೊನೆಯಲ್ಲಿ ಟೀ ಸ್ಟಾಲ್ ತೆರೆಯುವ ಮೂಲಕ ಉದ್ಯಮಿಯಾಗುವ ಕನಸಿನೊಂದಿಗೆ ಮುಂದುವರಿದು, ದೇಶಾದ್ಯಂತ 22 ಕ್ಕೂ ಹೆಚ್ಚಿನ ಮಳಿಗೆಯನ್ನು ಹೊಂದಿರುವ ಕೋಟ್ಯಾಧಿಪತಿಯಾಗಿದ್ದಾರೆ.