ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಎದುರು ಲಖನೌ ಸೂಪರ್‌ ಜೈಂಟ್ಸ್‌ಗೆ 6 ವಿಕೆಟ್‌ಗಳ ರೋಚಕ ಗೆಲುವು

Prasthutha|

ಚೆನ್ನೈ: ಲಖನೌ ಸೂಪರ್‌ ಜೈಂಟ್ಸ್ ತಂಡ ಐಪಿಎಲ್-17ರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಎದುರು 6 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ.

- Advertisement -

ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ (124*ರನ್, 63 ಎಸೆತ, 13 ಬೌಂಡರಿ, 6ಸಿಕ್ಸರ್) ಚೊಚ್ಚಲ ಟಿ20 ಶತಕದ ಸಾಹಸದಿಂದ ಇದು ಸಾಧ್ಯವಾಗಿದೆ.

ಇದರೊಂದಿಗೆ ಕೆಎಲ್ ರಾಹುಲ್ ತಂಡ ಸಿಎಸ್‌ಕೆ ಎದುರು 5 ದಿನಗಳ ಅಂತರದಲ್ಲಿ ಸತತ 2ನೇ ಗೆಲುವು ದಾಖಲಿಸಿದಂತಾಗಿದೆ. ಕಳೆದ ಶುಕ್ರವಾರವಷ್ಟೇ ಲಖನೌದಲ್ಲಿ ನಡೆದ ಮುಖಾಮುಖಿಯಲ್ಲೂ ಗೆದ್ದಿದ್ದ ಎಲ್‌ಎಸ್‌ಜಿ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ನಾಯಕ ಋತುರಾಜ್ ಗಾಯಕ್ವಾಡ್ (108* ರನ್, 60 ಎಸೆತ, 12 ಬೌಂಡರಿ, 3 ಸಿಕ್ಸರ್) ಶತಕದ ನಡುವೆಯೂ ಸಿಎಸ್‌ಕೆ ತಂಡ ಹಾಲಿ ಆವೃತ್ತಿಯಲ್ಲಿ ತವರಿನಲ್ಲಿ ಮೊದಲ ಬಾರಿ ಮುಗ್ಗರಿಸಿದ್ದು, 5ನೇ ಸ್ಥಾನಕ್ಕೆ ಕುಸಿದಿದೆ.

- Advertisement -

ಚೆಪಾಕ್ ಅಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ ಋತುರಾಜ್ ಹಾಗೂ ಶಿವಂ ದುಬೆ (66 ರನ್, 27 ಎಸೆತ, 3 ಬೌಂಡರಿ, 7 ಸಿಕ್ಸರ್) ನಡೆಸಿದ ಭರ್ಜರಿ ಜತೆಯಾಟದ ಬಲದಿಂದ 4 ವಿಕೆಟ್‌ಗೆ 210 ರನ್ ಕಲೆಹಾಕಿತು. ಪ್ರತಿಯಾಗಿ ಆರಂಭಿಕ ಆಘಾತ ಕಂಡ ಲಖನೌ, ಮಾರ್ಕಸ್ ಸ್ಟೋಯಿನಿಸ್ ಏಕಾಂಗಿ ಹೋರಾಟದಿಂದ 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 213 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು. ಕೊನೇ 6 ಓವರ್‌ಗಳಲ್ಲಿ 87 ರನ್ ಗಳಿಸಬೇಕಿದ್ದ ಲಖನೌ 3 ಎಸೆತ ಬಾಕಿ ಇರುವಂತೆಯೇ ಜಯಿಸಿತು.

ಸ್ಟೋಯಿನಿಸ್ ಶತಕದಾಟ: ಸಿಎಸ್‌ಕೆ ಎದುರಿನ ಹಿಂದಿನ ಪಂದ್ಯದಲ್ಲಿ ಶತಕದ ಜತೆಯಾಟವಾಡಿದ್ದ ಕ್ವಿಂಟನ್ ಡಿಕಾಕ್ (0) ಹಾಗೂ ಕೆಎಲ್ ರಾಹುಲ್ (16) ಈ ಬಾರಿ ವಿಲರಾದರು. ಮೊದಲ ಓವರ್‌ನಲ್ಲಿ ದೀಪಕ್ ಚಹರ್, ಡಿಕಾಕ್ ವಿಕೆಟ್ ಕಬಳಿಸಿ ಶಾಕ್ ನೀಡಿದರು. ನಂತರ ರಾಹುಲ್ ಜತೆಯಾದ ಸ್ಟೋಯಿನಿಸ್ 25 ಎಸೆತಗಳಲ್ಲಿ 33 ರನ್‌ಗಳಿಸಿ ಆಸರೆಯಾದರು. ಆಗ ಮುಸ್ತಾಫಿಜುರ್ ಈ ಜೋಡಿಗೆ ಬ್ರೇಕ್ ಹಾಕಿದರು. ನಂತರ ಸ್ಟೋಯಿನಿಸ್ ಏಕಾಂಗಿ ಹೋರಾಟ ಮುಂದುವರಿಸಿದರು. ಕನ್ನಡಿಗ ದೇವದತ್ ಪಡಿಕ್ಕಲ್ (13) ಮತ್ತೆ ಎಡವಿದರು. ಇವರಿಬ್ಬರು 39 ಎಸೆತದಲ್ಲಿ 55 ರನ್‌ಗಳಿಸಿ ಬಲ ತುಂಬಿದರು. 26 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಲಖನೌ ಹೋರಾಟ ಜೀವಂತವಿರಿಸಿದ ಸ್ಟೋಯಿನಿಸ್‌ಗೆ ನಿಕೋಲಸ್ ಪೂರನ್ (34) ಬೆಂಬಲ ಒದಗಿಸಿದರು. ಸಿಎಸ್‌ಕೆ ಬೌಲರ್‌ಗಳಿಗೆ ಸವಾಲಾದ ಇವರಿಬ್ಬರು 4ನೇ ವಿಕೆಟ್‌ಗೆ 34 ಎಸೆತದಲ್ಲಿ 70 ರನ್ ಕಸಿದು ಆಸೆ ಚಿಗುರಿಸಿದರು. ಸ್ಟೋಯಿನಿಸ್ 56 ಎಸೆತಗಳಲ್ಲಿ ಚೊಚ್ಚಲ ಟಿ20 ಶತಕ ಬಾರಿಸಿದರು. ದೀಪಕ್ ಹೂಡಾ (17*) ಹಾಗೂ ಸ್ಟೋಯಿನಿಸ್ ಕೊನೇ 2 ಓವರ್‌ಗಳಲ್ಲಿ 32 ರನ್ ಬೇಕಿದ್ದಾಗ ಇನಿಂಗ್ಸ್‌ನ 19ನೇ ಓವರ್‌ನಲ್ಲಿ 15 ರನ್ ಕಸಿದರು. ಮುಸ್ತಾಫಿಜುರ್ ಎಸೆದ ಕೊನೇ ಓವರ್‌ನಲ್ಲಿ 17 ರನ್ ಅಗತ್ಯವಿದ್ದಾಗ ಸ್ಟೋಯಿನಿಸ್ 1 ಸಿಕ್ಸರ್, 3 ಬೌಂಡರಿ (1 ನೋಬಾಲ್) ಬಾರಿಸಿ 3 ಎಸೆತಗಳಲ್ಲೇ ಗೆಲುವು ತಂದುಕೊಟ್ಟರು.



Join Whatsapp