ರಾಮನಗರ: ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಹ್ಮಣಿಯನ್ ಅವರ ಹೇಳಿಕೆಯನ್ನು ವಾಟಾಳ್ ನಾಗರಾಜ್ ಖಂಡಿಸಿದ್ದಾರೆ.
ರಾಮನಗರದ ಐಜೂರು ಸರ್ಕಲ್ ಬಳಿ ವಾಟಾಳ್ ಅವರು ಪ್ರತಿಭಟನೆ ನಡೆಸಿ ಸುಬ್ರಮಣಿಯನ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಎಲ್ ಅಂಡ್ ಟಿ ಮುಖ್ಯಸ್ಥರನ್ನು ಮಾತ್ರವಲ್ಲ, ಇನ್ಫೋಸಿಸ್ ನ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ವಿರುದ್ಧವೂ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯಮಿಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ನೌಕರರ ಬೆನ್ನು ಮೂಳೆ ಮುರಿಯುತ್ತಿದ್ದಾರೆ. ಉದ್ಯೋಗಿಗಳ ಆರೋಗ್ಯ ಹಾಳು ಮಾಡ ಹೊರಟಿದ್ದಾರೆ ಎಂದು ಕನ್ನಡಪರ ಚಳವಳಿಗಾರರಾದ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ಎಲ್ ಅಂಡ್ ಟಿ ಮುಖ್ಯಸ್ಥ ಸುಬ್ರಹ್ಮಣಿಯನ್ ಅವರು ಹೆಂಡತಿಯ ಮುಖ ನೋಡಿ ಕೂರಬೇಡಿ ಎಂದು ನಿಕೃಷ್ಟವಾಗಿ ಮಾತನಾಡಿದ್ದಾರೆ. ಗಂಡ ಹೆಂಡತಿಯ ದಾಂಪತ್ಯ ಜೀವನಕ್ಕೆ ಅಗೌರವ ತೋರಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಕೂಡ ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಹೇಳುತ್ತಾರೆ. ಇವು ನೌಕರರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರವಾಗಿದೆ. ಸುಬ್ರಮಣಿಯನ್ ಮತ್ತು ನಾರಾಯಣಮೂರ್ತಿ ಅವರು ದೇಶದ ಪ್ರಜೆಗಳ ಕ್ಷಮೆಕೇಳಬೇಕು. ನೌಕರರಿಂದ ಹೆಚ್ಚಿಗೆ ಕೆಲಸ ಮಾಡುವ ಆಲೋಚನೆ ಕೈಬಿಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.