ಹಾಸನ: ತಾನು ಹೈಕಮಾಂಡ್ಗೆ ಕೇರ್ ಮಾಡಲ್ಲ ಎಂಬ ಬಿ.ಶಿವರಾಮ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಹಕಾರ ಸಚಿವ KN ರಾಜಣ್ಣ, ನಾನು ಹೈಕಮಾಂಡ್ಗೆ ನಿಷ್ಠೆ ಹೊಂದಿದ್ದೇನೆ, ಆದರೆ ಗುಲಾಮನಲ್ಲ. ಯಾರೋ ಮುಖಂಡರನ್ನು ಮೆಚ್ಚಿಸೋ ನಡವಳಿಕೆ ನನಗೆ ಬೇಕಿಲ್ಲ. ನನ್ನ ನಡವಳಿಕೆಯನ್ನು ಜನರು ಮೆಚ್ಚಬೇಕು. ಹೈಕಮಾಂಡ್ಗೆ ಹೆದರಲ್ಲ ಅನ್ನೋದು ನನ್ನಿಷ್ಟ. ನಾನು ಯಾರಿಗೆ ಹೆದರಬೇಕೋ ಅವರಿಗೆ ಮಾತ್ರ ಹೆದರುತ್ತೇನೆ ಎಂದು ಗುಡುಗಿದ್ದಾರೆ.
ನನ್ನ ಹೈ ಕಮಾಂಡ್ ನನ್ನ ಕ್ಷೇತ್ರದ ಮತದಾರರು. ಹೈಕಮಾಂಡ್ ಮಾತು ಯಾವಾಗ ಕೇಳಬೇಕೋ ಕೇಳುತ್ತೇನೆ. ಅವರ ಮಾತು ಧಿಕ್ಕರಿಸುವುದಿಲ್ಲ. ಆದರೆ ಅಂತಿಮವಾಗಿ ನಾನು ನಂಬುವುದು ನನ್ನ ಮತದಾರರನ್ನು ಎಂದಿದ್ದಾರೆ.
ತುಮಕೂರು ಅಭ್ಯರ್ಥಿ ಮುದ್ದು ಹನುಮೇಗೌಡ ಆಗಲಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಇದೇ ವೇಳೆ ಸಮರ್ಥಿಸಿಕೊಂಡ ರಾಜಣ್ಣ, ನಾನು ಶೇ.99 ರಷ್ಟು ಅವರು ಅಭ್ಯರ್ಥಿ ಆಗಬಹುದು ಎಂದು ಹೇಳಿದ್ದೇನೆ. ಇನ್ನೂ ಒಂದು ಪರ್ಸೆಂಟ್ ಇದೆಯಲ್ಲ. ನಾನೇನು ಅಭ್ಯರ್ಥಿ ಅಗುತ್ತಾರೆ ಅಂತ ಹೇಳಿಲ್ಲ. ಆಗಬಹುದು ಎಂದಷ್ಟೇ ಹೇಳಿದ್ದೇನೆ ಎಂದಿದ್ದಾರೆ.
ಅವರೇ ಅಭ್ಯರ್ಥಿ ಎಂದು ಹೇಳಲು ನಾನು ಹೈಕಮಾಂಡ್ ಅಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿ ಯಾರು ಎಂದು ದೆಹಲಿ ಮಟ್ಟದಲ್ಲಿ ಚರ್ಚೆ ಆಗಿದೆ ಎಂದು ಹೇಳಿದ ರಾಜಣ್ಣ, ರಣದೀಪ್ ಸುರ್ಜೇವಾಲ ಇಂದು ಬೆಂಗಳೂರಿಗೆ ಬರುತ್ತಾರೆ. ಹಾಸನ ಜಿಲ್ಲೆಯಲ್ಲಿ ನಾಲ್ಕೈದು ಜನ ಆಕಾಂಕ್ಷಿಗಳು ಇದ್ದಾರೆ. ಅಂತಿಮವಾಗಿ ಗೆಲುವೇ ಮಾನದಂಡವಾಗಿರಲಿದೆ ಎಂದು ಸಚಿವರು ಹೇಳಿದ್ದಾರೆ.