ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೋವಿಡ್ ವಾರ್ಡ್ನೊಳಗೆ ಲವ್ ಯು ಜಿಂದಗಿ ಹಾಡಿಗೆ ತಲೆಯಾಡಿಸಿ, ಕ್ಯಾಮೆರಾಗೆ ಕೈ ಬೀಸಿ ಹಾಯ್ ಎಂದಿದ್ದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಆಕ್ಸಿಜನ್ ಮಾಸ್ಕ್ ಧರಿಸಿ, ಡಿಯರ್ ಜಿಂದಗಿ ಚಿತ್ರದ ಹಾಡು ಲವ್ ಯೂ ಜಿಂದಗಿ ಹಾಡಿಗೆ ತಲೆಯಾಡಿಸಿದ್ದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲವು ಈಕೆ ಗುಣಮುಖಳಾಗಿ ಬರಲು ಹಾರೈಸಿದ್ದರು. ಆದರೆ ಯುವತಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಾ.ಮೋನಿಕಾ ಲಂಗೆಹ್,“ನನ್ನನ್ನು ಕ್ಷಮಿಸಿ. ನಾವು ಗಟ್ಟಿಗಿತ್ತಿಯನ್ನು ಕಳೆದುಕೊಂಡಿದ್ದೇವೆ” ಎಂದು ಅತ್ಯಂತ ದುಃಖತಪ್ತರಾಗಿ ಹೇಳಿದ್ದಾರೆ.
ಈ ಯುವತಿಯ ವಯಸ್ಸು 30ವರ್ಷ. ಕಳೆದ 10 ದಿನಗಳಿಂದ ಆಕೆಗೆ ಐಸಿಯು ಬೆಡ್ ಸಿಗದ ಕಾರಣ ಕೊವಿಡ್ ಎಮರ್ಜೆನ್ಸಿ ವಿಭಾಗದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇವಲ ಆಕ್ಸಿಜನ್ ಸಹಾಯ ಪಡೆದಿರುವ ಈಕೆಗೆ ರೆಮ್ಡಿಸಿವಿರ್ ಹಾಗೂ ಪ್ಲಾಸ್ಮಾ ಚಿಕಿತ್ಸೆ ಸೇರಿದಂತೆ ಕೆಲ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಎಲ್ಲಕ್ಕೂ ಮಿಗಿಲಾಗಿ ಈಕೆ ಗಟ್ಟಿಗಿತ್ತಿ. ಯಾವ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು ಎನ್ನುವುದಕ್ಕೆ ಈಕೆಯೇ ಉದಾಹರಣೆ. ಈ ಧೈರ್ಯವಂತ ಯುವತಿಗಾಗಿ ಪ್ರಾರ್ಥಿಸಿ, ಆಕೆಗಾಗಿ ಪುಟ್ಟ ಮಗು ಮನೆಯಲ್ಲಿ ಕಾಯುತ್ತಿದೆ ಎಂದು ವೈದ್ಯರು ಹೇಳಿದ್ದರು.
ದೇಶದಲ್ಲಿ ಕೆಲವು ವಾರಗಳಿಂದ ಅಟ್ಟಹಾಸ ಮೆರೆಯುತ್ತಿರುವ ಕೊರೋನಾದಿಂದ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವರದಿಯಾಗುತ್ತಿದೆ.