ಬೆಳಗಾವಿ: ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಕರ್ನಾಟಕ ವಾಯವ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಎಂದು ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಈ ಮೂಲಕ ಆಡಳಿತ ಪಕ್ಷ ಶಾಸಕರೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವುದರಿಂದ ರಾಜ್ಯ ವಾಯವ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಬಸ್ ನಿಗಮಕ್ಕೆ ಸಮಸ್ಯೆ ಆಗಿದೆ. ಕೆಲವು ಲೋಪದೋಷಗಳನ್ನು ನಾವು ಅರಿತಿದ್ದೇವೆ. ರಾಜ್ಯ ಸರ್ಕಾರ ಗಮನಕ್ಕೂ ತಂದಿದ್ದೇವೆ. ಹಳ್ಳಿಗಳಲ್ಲಿ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆ ಆಗುತ್ತಿದೆ ಎಂದಿದ್ದಾರೆ.
ಸದ್ಯ ಈ ಭಾಗಕ್ಕೆ 375 ಬಸ್ ಗಳನ್ನು ಖರೀದಿ ಮಾಡಿದ್ದು, ಮುಂದಿನ ದಿನಗಳಲ್ಲಿ 300 ಬಸ್ ಗಳನ್ನು ಖರೀದಿ ಮಾಡಲಿದ್ದೇವೆ. ಈ ಮೂಲಕ ಹಾಲಿ ಸಮಸ್ಯೆಯನ್ನು ಪರಿಹರಿಸುವ ಚಿಂತನೆಯಲ್ಲಿದ್ದೇವೆ ಎಂದು ಇದೇ ಸಂದರ್ಭ ಶಾಸಕರು ಹೇಳಿದ್ದಾರೆ.