ಬೆಂಗಳೂರು: ಪದವಿ ಕಾಲೇಜು ತೆರೆದು ನಷ್ಟವುಂಟಾಗಿ ವ್ಯಕ್ತಿಯೊಬ್ಬರು ಕಾಲೇಜಿನಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಟಿ.ದಾಸರಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕೆಂಪಾಪುರದ ಮಂಜುನಾಥ್(31) ಎಂದು ಗುರುತಿಸಲಾಗಿದೆ. ಮಂಜುನಾಥ್ ಡೆತ್ನೋಟ್ ಬರೆದಿಟ್ಟು ಕಾಲೇಜಿನಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪದವಿ ಕಾಲೇಜು ಆರಂಭದಿಂದ 20 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾದ ಹಿನ್ನೆಲೆಯಲ್ಲಿ ಸಹಭಾಗಿತ್ವ ಹೊಂದಿರುವವರು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದರು ಎಂದು ಮೃತ ಮಂಜುನಾಥ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.
ಚಂದ್ರು ಮತ್ತು ಮಲ್ಲಿಕಾರ್ಜುನ ಎಂಬವರ ಜೊತೆ ಸೇರಿ ಮಂಜುನಾಥ್ ಕಾಲೇಜು ಆರಂಭ ಮಾಡಿದ್ದು ಕೊರೊನಾ ಹಿನ್ನೆಲೆ ಕಾಲೇಜು ನಡೆಸಲು ಕಷ್ಟವಾಗಿ ಹಣಕಾಸಿನ ತೀವ್ರ ತೊಂದರೆ ಎದುರಾಗಿತ್ತು. ಇದರಿಂದಾಗಿ ತೀವ್ರ ಮನನೊಂದ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತ ಮಂಜುನಾಥ್ 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು ಪತ್ನಿಗೆ ಕಾಲೇಜು ಬಳಿ ಹೋಗುವುದಾಗಿ ತಿಳಿಸಿದ್ದರು.ಹಲವು ಗಂಟೆಗಳು ಕಳೆದರೂ ಮನೆಗೆ ಬರದ ಹಿನ್ನೆಲೆಯಲ್ಲಿ ಪತ್ನಿ ಕಾಲೇಜು ಬಳಿ ಬಂದು ನೋಡಿದಾಗ ಮಂಜುನಾಥ್ ನೇಣಿಗೆ ಶರಣಾಗಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಮಂಜುನಾಥ್ ಜೊತೆಗೆ ಸಹಭಾಗಿತ್ವ ಹೊಂದಿದ್ದ ಚಂದ್ರು ಹಾಗೂ ಮಲ್ಲಿಕಾರ್ಜುನ ವಿರುದ್ಧ ಕಿರುಕುಳ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.