ಪೆರಿಯಾರ್ ಪ್ರತಿಮೆಗೆ ಲಾರಿ ಡಿಕ್ಕಿ: ಪ್ರತಿಮೆಗೆ ಹಾನಿ

Prasthutha|

ವಿಲ್ಲುಪುರಂ: ಕಂಟೈನರ್ ಲಾರಿಯೊಂದು ಸಮಾಜ ಸುಧಾರಕ ಪೆರಿಯಾರ್ ಇ.ವಿ ರಾಮಸ್ವಾಮಿ ಅವರ ಪ್ರತಿಮೆಗೆ ಡಿಕ್ಕಿ ಹೊಡೆದ ಪರಿಣಾಮ ಪ್ರತಿಮಗೆ ಹಾನಿಯಾಗಿರುವ ಘಟನೆ ಬುಧವಾರ ಮಧ್ಯರಾತ್ರಿ ವಿಲ್ಲುಪುರಂ ಪಟ್ಟಣದ ಕಾಮರಾಜ್ ಸಲೈ ಎಂಬಲ್ಲಿ ನಡೆದಿದೆ.
ಇದು ದುಷ್ಕರ್ಮಿಗಳ ಕೃತ್ಯ ಎಂಬುದನ್ನು ತಳ್ಳಿಹಾಕಿರುವ ಪೊಲೀಸರು, ಇದೊಂದು ಸಾಮಾಣ್ಯ ಅಪಘಾತವಾಗಿದ್ದು, ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಪುದುಚೇರಿಯ ನೆಟ್ಟಪಕ್ಕಂನಲ್ಲಿರುವ ಕಾರ್ಖಾನೆಯಿಂದ ಟೈರ್ ಗಳನ್ನು ಹೊತ್ತ ಕಂಟೈನರ್ ಲಾರಿ ಪುಣೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿ ಚಾಲಕ ಮಹೇಂದ್ರ ಸೇಬಲ್ ವಾಹನವನ್ನು ಹಿಮ್ಮುಖವಾಗಿ ತೆಗೆಯುತ್ತಿದ್ದಾಗ ಲಾರಿಯ ಹಿಂಭಾಗ ಪ್ರತಿಮೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪ್ರತಿಮೆ ಮತ್ತು ಪೀಠ ಉರುಳಿಬಿದ್ದು ಭಾರೀ ಹಾನಿಯಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಆಡಳಿತಾರೂಢ ಡಿಎಂಕೆ ಸದಸ್ಯರು ವಿಲ್ಲುಪುರಂ ಟೌನ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಲಾರಿ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾಲ್ಕು ರಸ್ತೆಗಳ ಜಂಕ್ಷನ್ ನಲ್ಲಿ ವಾಹನ ಸಂಚಾರ ತಡೆ ನಡೆಸಿದರು. ಹಾನಿಗೊಳಗಾದ ಪ್ರತಿಮೆಯನ್ನು ತೆಗೆಯಲು ಕಂದಾಯ ಅಧಿಕಾರಿಗಳು ಯತ್ನಿಸಿದ ಬೆನ್ನಲ್ಲೇ ಸದಸ್ಯರು ಪೊಲೀಸ್ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.
ಹಿರಿಯ ಪೊಲೀಸ್ ಸಿಬ್ಬಂದಿ ಅವರನ್ನು ಸಮಾಧಾನಪಡಿಸಿದ ನಂತರ ಪ್ರತಿಭಟನೆ ಹಿಂಪಡೆದರು. ಲಾರಿ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಸುಮಾರು 40 ವರ್ಷಗಳ ಹಿಂದೆ ಪಟ್ಟಣದ ಕಾಮರಾಜ ಸಾಲೈ ಎಂಬಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp