ಮಂಗಳೂರು: ನಿಯಂತ್ರಣ ಕಳೆದುಕೊಂಡ ಲಾರಿಯೊಂದು ರಸ್ತೆ ವಿಭಜಕದ ಮೇಲೆ ಹತ್ತಿ ಆಟೋ, ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಮುಲ್ಕಿ ಪೇಟೆಯಲ್ಲಿ ನಡೆದಿದೆ.
ಘಟನೆಯಲ್ಲಿ ಟ್ರಾಫಿಕ್ ಡ್ಯೂಟಿ ಮೇಲಿದ್ದ ಮಹಿಳಾ ಪೊಲೀಸ್ ಗೀತಾ ಸತೀಶ್ ಎಂಬವರ ಕೈಗೆ, ಬೈಕ್ ಸವಾರ, ಆಟೋ ಚಾಲಕ, ಆಟೋದಲ್ಲಿದ್ದ ಜನರಿಗೆ ಗಾಯಗಳಾಗಿವೆ. ಲಾರಿ ಹೊಡೆತಕ್ಕೆ ಲಾಡ್ಜ್ ಒಂದರಲ್ಲಿ ವಾಚ್ಮೇನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬೈಕ್ ಸವಾರ ಸಂಗಪ್ಪ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಲ್ಕಿ ಜಂಕ್ಷನ್ ಬಳಿ ಹೆದ್ದಾರಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡ್ ಗಳನ್ನು ತಪ್ಪಿಸಲು ಯತ್ನಿಸಿ, ಲಾರಿ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಅಪಘಾತದ ಸಂದರ್ಭ ಸರ್ವಿಸ್ ರಸ್ತೆಯ ಬದಿಯಲ್ಲಿ ಕುಳಿತಿದ್ದ ಉತ್ತರ ಕರ್ನಾಟಕದ ಅನೇಕ ಕೂಲಿ ಕಾರ್ಮಿಕರು ಜೀವ ಭಯದಿಂದ ಓಡಿ ಪವಾಡ ಸದೃಶ ಪಾರಾಗಿದ್ದಾರೆ. ಘಟನೆ ಸಂಬಂಧ ಮುಲ್ಕಿ ಪೊಲೀಸರು ಲಾರಿ ಚಾಲಕ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.