ಮಂಗಳೂರು: ತಮಿಳುನಾಡಿನ ಆಂಬೂರು ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಿ.ಸಿ.ರೋಡಿನ ಯುವಕನೋರ್ವ ಮೃತಪಟ್ಟ ಘಟನೆ ತಡರಾತ್ರಿ ಸಂಭವಿಸಿದೆ.
ಮೃತರನ್ನು ಇರ್ಷಾದ್ ತಲಪಾಡಿ (37) ಎಂದು ಗುರುತಿಸಲಾಗಿದೆ.
ಮಂಗಳೂರು ಬಂದರು ಧಕ್ಕೆಯಿಂದ ತಮಿಳುನಾಡಿನ ಚೆನ್ನೈ ಮಾರುಕಟ್ಟೆಗೆ ಮೀನು ಸಾಗಿಸುತ್ತಿದ್ದ ಲಾರಿ ಆಂಬೂರ್ ಬಳಿ ನಿಲ್ಲಿಸಿದ್ದ ವಾಹನವೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಲಾರಿಯಲ್ಲಿ ಇಬ್ಬರು ಚಾಲಕರಿದ್ದರು ಎಂದು ತಿಳಿದುಬಂದಿದೆ. ಮೃತ ಇರ್ಷಾದ್ ಅವರ ತಂದೆ ಇತ್ತೀಚೆಗಷ್ಟೇ ನಿಧನ ಹೊಂದಿದ್ದರು. ಇರ್ಷಾದ್ ಅವರು ಪತ್ನಿ, ತಾಯಿ, ಇಬ್ಬರು ಸಣ್ಣ ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.
ಇರ್ಷಾದ್ ಅವರ ಸಹೋದರ ಕೂಡ ಮೀನು ವ್ಯಾಪಾರಿಯಾಗಿದ್ದು ಅವರು ಘಟನಾ ಸ್ಥಳಕ್ಕೆ ತೆರಳಿ ಮೃತ ದೇಹವನ್ನು ಊರಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.