ವಿಚಾರಣೆ ಇಲ್ಲದೆ ಕೈದಿಗಳ ದೀರ್ಘಾವಧಿ ಬಂಧನ ಕಳವಳಕಾರಿ: ಸುಪ್ರೀಂಕೋರ್ಟ್ ಸಿಜೆಐ ಎನ್.ವಿ.ರಮಣ

Prasthutha|

►ವಿಚಾರಣೆ ಇಲ್ಲದೆ ದೀರ್ಘಾವಧಿ ಬಂಧನದಲ್ಲಿಡುವುದು ಕೂಡ ಒಂದು ಶಿಕ್ಷೆಯೇ ಆಗಿದೆ

- Advertisement -

ಜೈಪುರ: ದೇಶದ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ವಿಚಾರಣೆ ಇಲ್ಲದೆ ಕೈದಿಗಳ ದೀರ್ಘಾವಧಿ ಬಂಧನ ಸರಿಯಲ್ಲ. ಯಾವುದೇ ವಿಚಾರಣೆ ಇಲ್ಲದೇ ದೀರ್ಘಾವಧಿಯವರೆಗೆ ಕೈದಿಗಳನ್ನು ಜೈನಲ್ಲಿಡುವುದು ಅಮಾನವೀಯ. ಇದರಿಂದ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಳವಾಗಿ ಅಪರಾಧ ನ್ಯಾಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ​(ಸಿಪಿಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ದೇಶದಲ್ಲಿರುವ 61.10 ಲಕ್ಷ ಕೈದಿಗಳಲ್ಲಿ ಶೇಕಡಾ 80ರಷ್ಟು ಕೈದಿಗಳು ವಿಚಾರಣಾಧೀನ ಕೈದಿಗಳಾಗಿದ್ದಾರೆ. ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವಿಚಾರಣೆ ಇಲ್ಲದೆ ದೀರ್ಘಾವಧಿ ಬಂಧನದಲ್ಲಿಡುವುದು ಕೂಡ ಒಂದು ಶಿಕ್ಷೆಯೇ ಆಗಿದೆ. ಆತುರದ, ವಿವೇಚನೆಯಿಲ್ಲದ ಬಂಧನಗಳಿಂದ ಹಿಡಿದು, ಜಾಮೀನು ಪಡೆಯುವಲ್ಲಿನ ಕಷ್ಟದವರೆಗೆ ಈ ಪ್ರಕ್ರಿಯೆಯು ವಿಚಾರಣಾಧೀನ ಕೈದಿಗಳ ದೀರ್ಘಾವಧಿಯ ಸೆರೆವಾಸಕ್ಕೆ ಕಾರಣವಾಗುತ್ತದೆ ಎಂದು ಅವರು ವ್ಯಾಖ್ಯಾನಿಸಿದರು.

- Advertisement -

ದೇಶದ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಇತ್ತೀಚೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಕಳವಳ ವ್ಯಕ್ತಪಡಿಸಿದ್ದಕ್ಕೆ ತಿರುಗೇಟು ನೀಡಿದ ಎನ್.ವಿ.ರಮಣ, ಇಷ್ಟೊಂದು ಸಂಖ್ಯೆಯಲ್ಲಿ ಬಾಕಿಯಾಗಲು ನ್ಯಾಯಾಂಗಕ್ಕೆ ಅಗತ್ಯ ಮೂಲಸೌಕರ್ಯ ಒದಗಿಸದಿರುವುದು ಮತ್ತು ನೇಮಕಾತಿ ಮಾಡದಿರುವುದು ಕಾರಣ ಎಂದು ಹೇಳಿದರು.

ರಾಜಕೀಯ ವಿರೋಧವು ಹಗೆತನಕ್ಕೆ ಬದಲಾಗುತ್ತಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಅವರು ದೇಶದಲ್ಲಿ ಪ್ರತಿಪಕ್ಷಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳನ್ನು ಪರೋಕ್ಷವಾಗಿ ಟೀಕಿಸಿದರು.

ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಗೌರವವು ಕಡಿಮೆಯಾಗುತ್ತಿದೆ. ರಾಜಕೀಯ ವಿರೋಧವು ಹಗೆತನಕ್ಕೆ ಪರಿವರ್ತಿತವಾಗಬಾರದು. ಇದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡುವಂತಾಗಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣಗಳಲ್ಲ ಎಂದು ರಮಣ ಬೇಸರ ವ್ಯಕ್ತಪಡಿಸಿದರು.

ದೇಶವು ಶಾಸಕಾಂಗ ಕಾರ್ಯಕ್ಷಮತೆಯ ಗುಣಮಟ್ಟದಲ್ಲಿ ಕುಸಿತವನ್ನು ಕಾಣುತ್ತಿದೆ. ವಿವರವಾದ ಚರ್ಚೆಗಳು ಮತ್ತು ಪರಿಶೀಲನೆಗಳಿಲ್ಲದೆ ಕಾನೂನುಗಳನ್ನು ಅಂಗೀಕರಿಸಲಾಗುತ್ತಿದೆ ಎಂದು ಹೇಳಿದ ಅವರು, ಈ ಬಗ್ಗೆ ಗಂಭೀರ ಚರ್ಚೆ ನಡೆಯುವುದು ಅಗತ್ಯ ಎಂದು ಹೇಳಿದರು.

ದೇಶದಲ್ಲಿ ಪ್ರಬಲ ಮತ್ತು ಕ್ರಿಯಾಶೀಲ ವಿರೋಧ ಪಕ್ಷವಿದ್ದರೆ ಆಡಳಿತ ಸುಧಾರಣೆಯಾಗುತ್ತದೆ. ಸರ್ಕಾರದ ನಡತೆಯೂ ಸರಿಯಾಗಿರುತ್ತದೆ. ಆದರೆ ದೇಶದಲ್ಲಿ ವಿರೋಧ ಪಕ್ಷಗಳ ಸ್ಥಾನ ಕುಗ್ಗುತ್ತಿದೆ ಎಂದು ಹೇಳಿದ ರಮಣ, ಕಾನೂನು ರೂಪಿಸುವ ಜನಪ್ರತಿನಿಧಿಗಳಿಗೆ ಕಾನೂನಿನ ಅರಿವು ಇರಬೇಕು. ಪ್ರತಿ ಶಾಸಕನಿಗೂ ಕಾನೂನು ಪರಿಣಗರ ನೆರವು ಸಿಗಬೇಕು ಎಂದು ಹೇಳಿದರು.



Join Whatsapp