ಐಪಿಎಲ್ ಬೆಟ್ಟಿಂಗ್ ದಂಧೆಕೋರರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸರು

Prasthutha|

ಗದಗ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರಿಂದ ಲಂಚ ಪಡೆಯುತ್ತಿದ್ದಾಗ ಪಿಎಸ್​ಐ ಸಹಿತ ಮೂವರು ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

- Advertisement -

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ದಾಭಾದಲ್ಲಿ ಬೆಟ್ಟಿಂಗ್ ದಂಧೆಕೋರರಿಂದ 1 ಲಕ್ಷ ಲಂಚ ಪಡೆಯುತ್ತಿದ್ದಾಗ ಗಜೇಂದ್ರಗಡ ಪೊಲೀಸ್ ಠಾಣೆಯ ಪಿಎಸ್ಐ ರಾಘವೇಂದ್ರ ಎಸ್ ಮತ್ತು ಇಬ್ಬರು ಕಾನ್ಸ್‌ಟೇಬಲ್‌ಗಳನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಗಜೇಂದ್ರಗಡದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಸಿಕ್ಕಿ ಬಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡಲು ಪಿಎಸ್​ಐ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ವಿನಾಯಕ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿ ಲಂಚದ ಹಣದ ಪೈಕಿ 1 ಲಕ್ಷ ನೀಡಲು ಪಟ್ಟಣದಲ್ಲಿರುವ ಧಾಬಾಕ್ಕೆ ತೆರಳಿದ್ದಾರೆ.

- Advertisement -

ವಿನಾಯಕ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್​ಪಿ ಶಂಕರ ರಾಗಿ, ಸಿಪಿಐ ಪುರುಷೋತ್ತಮ, ಅಜೀಜ್ ಕಲಾದಾಗಿ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದಾರೆ. ವಿನಾಯಕ ಅವರಿಂದ ಪಿಎಸ್​ಐ ಮತ್ತು ಇಬ್ಬರು ಕಾನ್​ಸ್ಟೇಬಲ್​ಗಳು 1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಏಪ್ರಿಲ್ 23 ರಂದು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಬೆಟ್ಟಿಂಗ್ ಆಡುತ್ತಿದ್ದಾಗ ಮೂವರನ್ನು ಗಜೇಂದ್ರಗಡ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ನಗದು 2500ರೂ.ಹಣ ಹಾಗೂ ಮೊಬೈಲ್ ಜಪ್ತಿ ಮಾಡಿದ್ದರು.

ಆ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 0054/2023 ಕಲಂ-78[1][ಎ][4][6]ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡುವಾಗ ಪಿಎಸ್ಐ ರಾಘವೇಂದ್ರ, ಪೇದೆಗಳಾದ ಶರಣಪ್ಪ ಭಜಂತ್ರಿ ಹಾಗೂ ಕುರಿ ಎಂಬುವರು ಎರಡು ಲಕ್ಷ ರೂ. ಹಣ ಡೀಮ್ಯಾಂಡ್ ಮಾಡಿದ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ವಿನಾಯಕ ಜರತಾರಿ ಎಂಬುವರು ದೂರು ನೀಡಿದ್ದರು.