►ಡಿಎಂಕೆ 21, ಕಾಂಗ್ರೆಸ್ 09ರಲ್ಲಿ ಸ್ಪರ್ಧೆ
ಚೆನ್ನೈ: ಇಂಡಿಯಾ ಒಕ್ಕೂಟದ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಲೋಕಸಭಾ ಚುನಾವಣೆಯ ಸ್ಥಾನ ಹಂಚಿಕೆ ಅಂತಿಮವಾಗಿದೆ. ತಮಿಳುನಾಡಿನ 39 ಕ್ಷೇತ್ರಗಳ ಪೈಕಿ ಡಿಎಂಕೆ 21, ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಮೈತ್ರಿ ಪಕ್ಷಗಳಿಗೆ 8 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ತಮಿಳುನಾಡಿನಲ್ಲಿ 9 ಕ್ಷೇತ್ರಗಳು ಹಂಚಿಕೆಯಾಗಿದ್ದು, ಇಂದು ಡಿಎಂಕೆ ಕೇಂದ್ರ ಕಚೇರಿಯಲ್ಲಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ತಮಿಳುನಾಡು ಪಕ್ಕದ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಫರ್ಧಿಸಲಿದೆ.
ಡಿಎಂಕೆ ಪಕ್ಷ ತಮಿಳುನಾಡಿನ 39 ಕ್ಷೇತ್ರಗಳ ಪೈಕಿ 21ರಲ್ಲಿ ಸ್ಫರ್ಧಿಸಲಿದೆ.ಕಾಂಗ್ರೆಸ್ ಗೆ 9 ಸ್ಥಾನ ಬಿಟ್ಟುಕೊಟ್ಟಿದ್ದು, ಮೈತ್ರಿ ಕೂಟದ ಉಳಿದ ಪಕ್ಷಗಳಿಗೆ 8 ಕ್ಷೇತ್ರಗಳನ್ನು ಹಂಚಲಾಗಿದೆ. ಸಿಪಿಎಂ ಗೆ 2, ಸಿಪಿಐಗೆ 2. ವಿಸಿಕೆಗೆ 2, ಮುಸ್ಲಿಮ್ ಲೀಗ್ ಮತ್ತು ಕೆಡಿಎಂಕೆಗೆ ತಲಾ 1 ಸೀಟ್ ಹಂಚಿಕೆ ಮಾಡಲಾಗಿದೆ.
ದಿಂಡಿಗಲ್ ಮತ್ತು ಮಧುರೈ ಕ್ಷೇತ್ರ ಸಿಪಿಎಂಗೆ, ನಾಗಪಟ್ಟಿಣಂ ಮತ್ತು ತಿರುಪ್ಪೂರು ಕ್ಷೇತ್ರ ಸಿಪಿಐಗೆ, ಚಿದಂಬರಂ ಮತ್ತು ವಿಲ್ಲುಪುರಂ ಕ್ಷೇತ್ರವನ್ನು ವಿಸಿಕೆಗೆ, ರಾಮನಾಥಪುರಂ ಕ್ಷೇತ್ರ ಮುಸ್ಲಿಮ್ ಲೀಗ್ ಗೆ, ನಾಮಕ್ಕಲ್ ಕ್ಷೇತ್ರ ಕೆಡಿಎಂಕೆಗೆ ಹಂಚಿಕೆಯಾಗಿದೆ.