ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದ ದೇಶದ ಮೊದಲ ಕ್ಷೇತ್ರ: ಲೋಕಸಭಾ ಚುನಾವಣೆ 2024ರ ಮತ ಎಣಿಕೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿದ ದೇಶದ ಮೊದಲ ಕ್ಷೇತ್ರ ಎಂಬ ಹಿರಿಮೆಗೆ ಕರ್ನಾಟಕದ ಚಿತ್ರದುರ್ಗ ಪಾತ್ರವಾಗಿದೆ. ದೇಶದಲ್ಲಿಯೇ ಪ್ರಥಮವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವಿಜೇತ ಅಭ್ಯರ್ಥಿಯನ್ನು ENCORE ತಂತ್ರಾಂಶದಲ್ಲಿ ಅಧೀಕೃತವಾಗಿ ಘೋಷಣೆ ಮಾಡಲಾಗಿದೆ.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಎದುರು 48,121 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ
ಇಂಧೋರ್ ಲೋಕಸಭಾ ಕ್ಷೇತ್ರದ ಎರಡು ದಾಖಲೆ: ಈ ಕ್ಷೇತ್ರದಲ್ಲಿ ಬಿಜೆಪಿಯ ಶಂಕರ್ ಲಾಲ್ವಾನಿ ಇಡೀ ದೇಶದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಬಹುಜನ ಸಮಾಜವಾದಿ ಪಕ್ಷದ ಸಂಜಯ್ ವಿರುದ್ಧ 10 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.
ಇದೇ ಇಂಧೊರ್ ಕ್ಷೇತ್ರದಲ್ಲಿ 2 ಲಕ್ಷದ 18 ಸಾವಿರಕ್ಕೂ ಹೆಚ್ಚು ಮತಗಳು ನೋಟಾ ಬಿದ್ದಿದೆ. ಇದು ಕೂಡ ದಾಖಲೆಯಾಗಿದೆ.2019 ರ ಚುನಾವಣೆಯಲ್ಲಿ, ಬಿಹಾರದ ಗೋಪಾಲ್‌ಗಂಜ್ ಲೋಕಸಭಾ ಕ್ಷೇತ್ರವು 51,660 ಗರಿಷ್ಠ ನೋಟಾ ಮತಗಳನ್ನು ದಾಖಲಿಸಿತ್ತು.
ಅತಿ ಕಿರಿಯ ಸಂಸದ: ಉತ್ತರ ಪ್ರದೇಶದ ಕೌಶಂಬಿ ಕ್ಷೇತ್ರದಿಂದ ಜಯ ಗಳಿಸಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಪುಷ್ಪೇಂದ್ರ ಸರೋಜ್ ಅತಿ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.1999ರ ಮಾ.1ರಂದು ಜನಿಸಿದ ಇವರು 25ಕ್ಕೆ ವರ್ಷಕ್ಕೆ ಕಾಲಿಡುವ ಎರಡು ದಿನ ಮೊದಲೇ ನಾಮಪತ್ರ ಸಲ್ಲಿಸಿದ್ದರು.
ಅಯೋಧ್ಯೆಯಲ್ಲಿಯೇ ಬಿಜೆಪಿ ಸೋಲು: ಅಯೋಧ್ಯೆಯಲ್ಲಿ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ನಂತರ, ತನ್ನ ಗೆಲುವು ನಿಶ್ಚಿತ ಎಂದೇ ಎನ್‌ಡಿಎ ವಿಶ್ವಾಸದಿಂದ ಬೀಗುತ್ತಿತ್ತು. ‘ಜೋ ರಾಮ್ ಕೊ ಲಾಯೆ ಹೈ, ಹಮ್ ಉನ್‌ಕೊ ಲಾಯೆಂಗೆ’ (ಯಾರು ರಾಮನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೋ ಅವರನ್ನು ಅಧಿಕಾರಕ್ಕೆ ತರುತ್ತೇವೆ) ಎಂಬ ಘೋಷಣೆಯನ್ನು ಬಿಜೆಪಿ ರಚಿಸಿತ್ತು. ಬಾಲ ರಾಮನ ಗುಡಿ ಇರುವ ಅಯೋಧ್ಯೆಯಲ್ಲಿಯೇ ಬಿಜೆಪಿ ಗೆಲುವಿನ ದಡ ಮುಟ್ಟಲು ವಿಫಲವಾಗಿ, ಭಾರಿ ಮುಖಭಂಗ ಅನುಭವಿಸಿದೆ. ಇಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ ಪ್ರಸಾದ್ ವಿರುದ್ಧ ಬಿಜೆಪಿಯ ಲಲ್ಲು ಸಿಂಗ್ 48,104 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಕರ್ನಾಟಕದಲ್ಲಿ ಅತ್ಯಧಿಕ ಮತ ಪಡೆದ ಪಕ್ಷ ಕಾಂಗ್ರೆಸ್: ಕರ್ನಾಟಕದಲ್ಲಿ ಸ್ಥಾನ ಬಿಜೆಪಿ ಗೆದ್ದುಕೊಂಡಿದ್ದರೂ, ಅತ್ಯಧಿಕ ಮತ ಗಳಿಸಿರುವುದು ಕಾಂಗ್ರೆಸ್ ಆಗಿದೆ. ಬಿಜೆಪಿ ಶೇ. 45.01 ಮತ ಗಳಿಸಿದರೆ, ಕಾಂಗ್ರೆಸ್ ಶೇ. 45.45 ಮತ ಗಳಿಸಿದೆ.
ಮುಖ ಮುಚ್ಚಿಕೊಂಡು ಕಣ್ಣೀರು: ಮೈ ಆಕ್ಸಿಸ್ ಇಂಡಿಯಾ ಸಂಸ್ಥೆಯ ಮಾಲೀಕ ಮಾತ್ರ ತಮ್ಮ ಎಕ್ಸಿಟ್ ಪೋಲ್ ಸುಳ್ಳಾಗಿದ್ದಕ್ಕೆ ಖಾಸಗಿ ನ್ಯೂಸ್ ಚಾನೆಲ್ ಲೈವ್ನಲ್ಲೇ ಗಳಗಳನೆ ಅತ್ತಿದ್ದಾರೆ. ಆಕ್ಸಿಸ್ ಮೈ ಇಂಡಿಯಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಗುಪ್ತಾ ಅವರು ಟೆಲಿವಿಷನ್ ಸಂದರ್ಶನದಲ್ಲಿ ತಮ್ಮ ಸಂಸ್ಥೆಯ ಚುನಾವಣಣೋತ್ತರ ಸಮೀಕ್ಷೆಯು ಸುಳ್ಳಾಗಿದ್ದಕ್ಕೆ ಕಣ್ಣೀರು ಸುರಿಸಿದ್ದಾರೆ. ಲೋಕಸಭೆ ಚುನಾವಣೆಯ ಫಲಿತಾಂಶಗಳು ಹೊರಬಿದ್ದು, ಆಡಳಿತಾರೂಢ ಎನ್‌ಡಿಎ ಸುಮಾರು 290 ಸ್ಥಾನಗಳಲ್ಲಿ ಸ್ಥಿರ ಮುನ್ನಡೆ ಕಾಯ್ದುಕೊಂಡಿತು. ಇದನ್ನು ಕಂಡ ಪ್ರದೀಪ್ ಗುಪ್ತಾ ಭಾವುಕಗೊಂಡರು. ಎರಡು ಕೈಗಳಿಂದ ಮುಖ ಮುಚ್ಚಿಕೊಂಡು ಕಣ್ಣೀರು ಹಾಕಿದರು.
ಇಂದಿರಾ ಗಾಂಧಿ ಹಂತಕ ಮಗ ಸಂಸತ್‌ಗೆ: ಮಾಜಿ ಪಿಎಂ ಪ್ರಧಾನಿ ಇಂದಿರಾ ಗಾಂಧಿ ಹಂತಕರಲ್ಲಿ ಒಬ್ಬನ ಮಗ ಸರಬ್ಜೀತ್ ಸಿಂಗ್ ಖಾಲ್ಸಾ ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದು, ಸಂಸತ್ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ.
ಕಣಿವೆ ರಾಜ್ಯದ 2 ಮಾಜಿ ಸಿಎಂ ಸೋಲು: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಮೆಹಬೂಬಾ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾ ಇಬ್ಬರಿಗೂ ಲೋಕಸಭೆ ಚುನಾವಣೆಯಲ್ಲಿ ಸೋಲು ದೊರೆತಿದೆ.
ಕರ್ನಾಟಕದಲ್ಲಿ ನೋಟಾ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೋಟಾಕ್ಕೆ 23,576 ಮತಗಳು ದೊರೆತಿದ್ದು, ರಾಜ್ಯದಲ್ಲೇ ಇದು ಗರಿಷ್ಠವಾಗಿದೆ. ನೋಟಾಕ್ಕೆ 11,191 ಮತ ದಾಖಲಾಗಿರುವ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ದ್ವಿತೀಯ ಸ್ಥಾನದಲ್ಲಿದೆ. ಇವೆರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿಯ ನಂತರದ ಸ್ಥಾನ ನೋಟಾಕ್ಕೆ ದೊರೆತಿದೆ.