ನರಸಿಂಹರಾಜಪುರ: ಇಂದು ರಾಜ್ಯಾದಂತ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಆರು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದ ಸತಿ- ಪತಿಯನ್ನು ರಾಜೀಸಂಧಾನದ ಮೂಲಕ ಒಂದಾಗಿಸುವಲ್ಲಿ ಯಶಸ್ಸಾಗಿದ್ದು ಗಮನ ಸೆಳೆದಿದೆ. ತಾಲೂಕಿ ಮೆಣಸೂರು ಗ್ರಾಮ ನಿವಾಸಿ ಎಂ.ಎ.ಜಾರ್ಜ್ ಅಲಿಯಾಸ್ ಯಾಕೋಬ್ ಮತ್ತು ಸುಗ್ಗಪ್ಪನ ಮಠದ ನಿವಾಸಿ ಮರಿಯಮ್ಮ ಅಲಿಯಾಸ್ ಆಶಾ ಲೋಕ ಅದಾಲತ್ ಕಾರಣ ಒಂದಾದ ಸತಿಪತಿ.
ವಿವಾಹವಾಗಿ ಹಲವು ವರ್ಷ ದಾಂಪತ್ಯ ಜೀವನ ನಡೆಸಿ ಇಬ್ಬರು ಪುತ್ರಿಯರಿದ್ದ ಗಂಡ-ಹೆಂಡತಿ ಮನಸ್ತಾಪದಿಂದಾಗಿ ಬೇರೆಯಾಗಿದ್ದರು. ಆಶಾ ತಮ್ಮ ಪುತ್ರಿಯರೊಂದಿಗೆ ಆರು ವರ್ಷದ ಮೂರು ತಿಂಗಳುಗಳಿಂದ ತವರು ಮನೆಯಲ್ಲಿದ್ದರು. ಪುತ್ರಿಯರೊಂದಿಗೆ ಮಾತನಾಡಲು ಜಾರ್ಜ್‌ಗೆ ಅವಕಾಶ ನೀಡಿರಲಿಲ್ಲ. ಇದರಿಂದ ಬೇಸತ್ತಿದ್ದ ಜಾರ್ಜ್ 10 ತಿಂಗಳ ಹಿಂದೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಆಶಾ ವಿಚ್ಛೇದನ ನಿರಾಕರಿಸಿದ್ದರು.
ಇಂದು ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಹಾಗೂ ತಮ್ಮ ವಕೀಲರ ಸಮ್ಮುಖದಲ್ಲಿ ಜಾರ್ಜ್ ಮತ್ತು ಆಶಾ ತಮ್ಮ ಕಹಿ ನೆನಪುಗಳನ್ನು ಮರೆತು ರಾಜೀಸಂಧಾನ ಮಾಡಿಕೊಂಡು ಪರಸ್ಪರ ಹಾರ ಬದಲಾಯಿಸಿಕೊಂಡು ಒಂದಾಗಿದ್ದಾರೆ.