ವಿಜಯಪುರ: ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ವಿಜಯೇಂದ್ರ ತಮಗೆ ಬೇಕಾದವರನ್ನು ನೇಮಿಸಿದ್ದಾರೆ. ಬಿಜೆಪಿ ಪಕ್ಷದಲ್ಲೇ ಇದ್ದು ಕೆಜೆಪಿ ಭಾಗ ಎರಡು ರಚಿಸಿದ್ದಾರೆ ಎಂದು ವಾಗ್ದಾಳಿ ಮುಂದುವರೆಸಿದ್ದಾರೆ.
ನಾವು ಬಿಜೆಪಿ ಕಾರ್ಯಕರ್ತರಲ್ಲ, ದೇಶದ ಕಾರ್ಯಕರ್ತರು. ನಿಷ್ಠಾವಂತ ಬಿಜೆಪಿಯವರಿಗಷ್ಟೇ ಪದಾಧಿಕಾರಿ ಸ್ಥಾನ ನೀಡಿದ್ದಾರೆ. ಅವರೆಲ್ಲರೂ ನಿಷ್ಠಾವಂತರು ಎಂದು ವ್ಯಂಗ್ಯವಾಡಿದ್ದಾರೆ.
ಪಕ್ಷದ ಹೈಕಮಾಂಡ್ ಕಳ್ಳರ ಕೈಗೇ ಚಾವಿ ಕೊಟ್ಟಿದೆ. ರಾಜಕೀಯದಲ್ಲಿ ಲಫಂಗರು, ಕಳ್ಳರ ಸಂಖ್ಯೆಯೇ ಇದೀಗ ಹೆಚ್ಚುತ್ತಿದೆ. ಸಭ್ಯ ರಾಜಕೀಯ ಮಾಡುವವರಿಗೆ ಅವಕಾಶ ಇಲ್ಲವಾಗಿದ್ದು, ರಾಜಕೀಯದಲ್ಲಿ ಮೌಲ್ಯಾಧಾರಿತ ರಾಜಕೀಯ ಮರೆಯಾಗಿದೆ ಎಂದಿದ್ದಾರೆ.
ಲೋಕಸಭೆ ಚುನಾವಣೆ ಬಳಿಕವೂ ಪಕ್ಷದ ವರಿಷ್ಠರು ಬಿಜೆಪಿ ರಾಜ್ಯ ಘಟಕಕ್ಕೆ ಮೇಜರ್ ಸರ್ಜರಿ ಮಾಡದಿದ್ದಲ್ಲಿ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪಕ್ಷದ ವರಿಷ್ಠರಿಗೆ ವಿಜಯೇಂದ್ರ ವಿರುದ್ಧ ತಮ್ಮ ಪ್ರತಿರೋಧ ಮುಂದುವರೆಯಲಿದೆ ಎಂದು ನೇರವಾಗಿ ಸಂದೇಶ ರವಾನಿಸಿದ್ದಾರೆ.
ನಾನು ಜನಮಾನಸದಿಂದ ಬಂದಿರುವ ವಿಲನ್, ಹೀರೋ ಅಲ್ಲ. ನಾನೂ ಆಲ್ವೇಸ್ ವಿಲನ್, ಸರ್ವಪಕ್ಷಗಳ ವಿಪಕ್ಷ ನಾಯಕ ನಾನೇ. ಚಿತ್ರರಂಗದಲ್ಲಿ ವಿಲನ್ ಆದವರೇ ನಂತರ ಅಂಬರೀಶ್ ಅವರಂತೆ ಹೀರೋ ಆಗಿದ್ದಾರೆ. ನಾನೂ ಒಂದು ದಿನ ಹೀರೋ ಆಗುವ ಅವಕಾಶ ಸಿಗಬಹುದು ಎಂದು ಹೇಳಿದ್ದಾರೆ.