ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿವಿಯ ಡಾ. ಡಿ.ಜಿ. ಪ್ರಕಾಶ್, ಡಾ. ಬಿ.ಸಿ. ಪ್ರಸನ್ನಕುಮಾರ್ ಗೆ ಸ್ಥಾನ

Prasthutha|

ದಾವಣಗೆರೆ: ಇತ್ತೀಚೆಗೆ ಬಿಡುಗಡೆಯಾದ ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ತಯಾರಿಸಿರುವ ವಿಶ್ವದ ಒಟ್ಟಾರೆ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಡಾ. ಡಿ.ಜಿ ಪ್ರಕಾಶ್ ಮತ್ತು ಡಾ. ಬಿ.ಸಿ. ಪ್ರಸನ್ನಕುಮಾರ್  ಸ್ಥಾನ ಪಡೆದಿದ್ದಾರೆ.

- Advertisement -

 ವಿಶ್ವದ ಅತ್ಯುನ್ನತ ವಿಜ್ಞಾನಿಗಳ  ಪೈಕಿ ಶೇಕಡ ಎರಡರಷ್ಟು ವಿಜ್ಞಾನಿಗಳನ್ನು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಪಟ್ಟಿ ಮಾಡಿದ್ದು ಈ ವರದಿಯಲ್ಲಿ 2020 ರವರೆಗಿನ ಅಂಕಿ ಅಂಶದ ಆಧಾರದಲ್ಲಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು ಸಂಶೋಧನಾ ಉಲ್ಲೇಖಗಳು, ಸಹ ಲೇಖನಗಳು, ಎಚ್ ಇಂಡೆಕ್ಸ್, ಐ ಟೆನ್ ಇಂಡೆಕ್ಸ್ ಸೇರಿದಂತೆ ಹಲವು ಸಂಯೋಜಿತ ಮಾನದಂಡಗಳನ್ನು ಬಳಸಿ ಸಿದ್ಧಪಡಿಸಿದ ಪಟ್ಟಿ ಇದಾಗಿದ್ದು ಗಣಿತಶಾಸ್ತ್ರ ವಿಭಾಗದಲ್ಲಿ  ಡಾ.ಡಿ.ಜಿ ಪ್ರಕಾಶ್ ಮತ್ತು ಡಾ .ಬಿ.ಸಿ ಪ್ರಸನ್ನಕುಮಾರ್ ರವರು ಸ್ಥಾನ ಪಡೆದಿದ್ದಾರೆ.  ಪ್ರಸ್ತುತ  ಈ ಇಬ್ಬರೂ ವಿಜ್ಞಾನಿಗಳು ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಗ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಡಾ.ಡಿ.ಜಿ. ಪ್ರಕಾಶ್ , ಭೇದ್ಯಾತ್ಮಕ ರೇಖಾಗಣಿತ(Differential Geometry), ಭಿನ್ನರಾಶಿ ಕಲನಶಾಸ್ತ್ರ (Fractional Calculus),ವಿಭಿನ್ನ ಸಮೀಕರಣಗಳಿಗೆ ಪರಿಹಾರಗಳು(Solutions to Differential Equations), ಅನ್ವಯಿಸುವ ಗಣಿತಶಾಸ್ತ್ರ(Applicable Mathematics)ಗಳ ಕುರಿತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಹಾಗೂ ಡಾ. ಬಿ.ಸಿ. ಪ್ರಸನ್ನ ಕುಮಾರ್,  ದ್ರವ ಯಂತ್ರಶಾಸ್ತ್ರ( Fluid Mechanics), ಶಾಖ ಮತ್ತು ಸಮೂಹ ವರ್ಗಾವಣೆ(Heat and Mass Transfer), ಸಂಖ್ಯಾತ್ಮಕ ವಿಶ್ಲೇಷಣೆ (Numerical Analysis),ಘನ ಯಂತ್ರಶಾಸ್ತ್ರ(Solid Mechanics)ಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

- Advertisement -

ಡಾ.ಡಿ.ಜಿ. ಪ್ರಕಾಶ್  ತಮ್ಮ 15 ವರ್ಷಗಳ ಸುದೀರ್ಘ ಸಂಶೋಧನೆಗೆ ಸಿಕ್ಕ ಫಲವಿದು, ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಸಂತೋಷದ ವಿಚಾರವಾಗಿದೆ ಎಂದು  ಸಂತೋಷ ವ್ಯಕ್ತಪಡಿಸಿದರೆ,   ನನ್ನ ಪಾಲಿಗೆ ದೊರೆತ ವಿಶ್ವದ ಅತ್ಯುತ್ತಮ ಪ್ರಶಸ್ತಿ ಮತ್ತು ನನ್ನ ಜೀವನದಲ್ಲಿ ಅವಿಸ್ಮರಣೀಯವಾದ ಘಟನೆ ಎಂದು ಡಾ. ಬಿ.ಸಿ ಪ್ರಸನ್ನಕುಮಾರ್  ಸಂತಸ ವ್ಯಕ್ತಪಡಿಸಿದ್ದಾರೆ.

 ವಿಶ್ವದ ಮಹಾನ್ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಸಾಧನೆಗೈದಿರುವ ಈ ಇಬ್ಬರೂ ಅಗ್ರ ವಿಜ್ಞಾನಿಗಳು ಗ್ರಾಮೀಣ ಪ್ರತಿಭೆಗಳಾಗಿರುವುದು ಗಮನಾರ್ಹವಾಗಿದೆ. ಡಾ. ಡಿ.ಜಿ. ಪ್ರಕಾಶ್ ರವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಮುಜರೆ ಹನುಮನಹಳ್ಳಿ ಗ್ರಾಮದವರಾಗಿದ್ದು, ಡಾ. ಬಿ.ಸಿ ಪ್ರಸನ್ನ ಕುಮಾರ್ ರವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ   ತಾಲ್ಲೂಕಿನ ಕುಡ್ಲೂರು ಗ್ರಾಮದವರಾಗಿದ್ದಾರೆ.

ಈ ಇಬ್ಬರಿಗೂ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳು. ಕುಲಸಚಿವರು,ಸಹೋದ್ಯೋಗಿಗಳು ಅಭಿನಂದಿಸಿದ್ದಾರೆ.

Join Whatsapp